ಬನ್ನಿಮಂಗಲ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸುವಂತೆ ಡಿಸಿಎಂಗೆ ಮನವಿ

ವರದಿ: ಹೈದರ್‌ಸಾಬ್, ಕುಂದಾಣ

ರಾಜ್ಯ ಸುದ್ದಿ 

CHETAN KENDULI

ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಬನ್ನಿಮಂಗಲದಲ್ಲಿರುವ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸುವಂತೆ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮನವಿ ಮಾಡಿದರು.

ಬೆಂಗಳೂರಿನ ಡಿಸಿಎಂ ಕಚೇರಿ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಅಂಗವಾಗಿ ಕರಪತ್ರಗಳನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು. ದೇವನಹಳ್ಳಿಯ ಜಿಲ್ಲಾಡಳಿತ ಭವನದ ಕೂಗಳತೆ ದೂರದಲ್ಲಿರುವ ಬನ್ನಿಮಂಗಲ ಗ್ರಾಮದಲ್ಲಿ ಸುಮಾರು ೬೨ ಎಕರೆಯಷ್ಟು ಕೆರೆ ವಿಸ್ತೀರ್ಣವಿದ್ದು, ಕೆರೆಗೆ ನೀರಿನ ಮೂಲಗಳು ಇಲ್ಲ. ಸಾವಕನಹಳ್ಳಿಯ ಕೆರೆಗೆ ಹರಿಯುತ್ತಿರುವ ಕೆಸಿವ್ಯಾಲಿ ನೀರು ಬನ್ನಿಮಂಗಲ ಕೆರೆಗೆ ತಿರುವು ನೀಡಿದರೆ, ಇಲ್ಲಿನ ೧೮ ಹಳ್ಳಿಗಳಲ್ಲಿರುವ ಸುಮಾರು ೪೫೦೦ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಸಾಕಷ್ಟು ರೈತರು ಕೃಷಿ ಮತ್ತು ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶೀಘ್ರವೇ ತಾವು ಕೆಸಿ ವ್ಯಾಲಿ ನೀರನ್ನು ಈ ಭಾಗದ ಕೆರೆಗೆ ಹರಿಸಲು ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತನಾಡಿ, ಕೆಸಿ ವ್ಯಾಲಿ ನೀರು ಹರಿಸುವ ಬಗ್ಗೆ ಕೂಡಲೇ ಮನವಿ ಪತ್ರವನ್ನು ನೀಡಿ, ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಕೆಸಿ ವ್ಯಾಲಿ ನೀರು ಹರಿಸಲು ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು. ಈವೇಳೆಯಲ್ಲಿ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ, ವೇದಿಕೆಯ ರಾಜ್ಯಾಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವೀಣಾರಮೇಶ್, ಯೋಜನಾಧಿಕಾರಿ ಗಣೇಶ್ ಆಚಾರ್ಯ ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*