ರಾಜ್ಯ ಸುದ್ದಿಗಳು
ಬೆಂಗಳೂರು:
ಪಕ್ಷದ ಬದ್ಧತೆಯ ಕಾರ್ಯಕರ್ತರು ಮತ್ತು ಮುಖಂಡರ ನೆರವಿನಿಂದ ಬಿಜೆಪಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯಲಿದೆ. ಉತ್ತರದ ಖಾನಾಪುರ ಮತ್ತು ದಕ್ಷಿಣದ ರಾಮನಗರದಲ್ಲಿ ಜನತೆಯೂ ಬಿಜೆಪಿ ಅಧಿಕಾರ ಪಡೆಯಲು ನೆರವಾಗಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ರಾಮನಗರ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆ ಖಾನಾಪುರದ ಪ್ರಮುಖ ಮುಖಂಡರು ಇಂದು ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆ ಕಾರ್ಯ ಪ್ರಾರಂಭಗೊಂಡಿದೆ. ಬಿಜೆಪಿ ಆಳವಾಗಿ ಬೇರೂರಿ ಶಕ್ತಿ ಪಡೆದಿರದ ಪ್ರದೇಶಗಳಲ್ಲಿ ಪಕ್ಷವು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಯಲಿದೆ ಎಂದು ನುಡಿದರು.
ರಾಜ್ಯದ ರಾಜಕೀಯದಲ್ಲಿ ಇಂದು ಅತ್ಯಂತ ಮಹತ್ವದ ದಿನ. ರಾಜಕಾರಣ ನಿಂತ ನೀರಲ್ಲ ಎಂಬ ಮಾತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನೆಲೆಯಾಗಿದ್ದ ಜಿಲ್ಲೆಗಳಲ್ಲಿ ಇಂದು ದೊಡ್ಡ ಬದಲಾವಣೆ ಆಗುತ್ತಿದೆ. ಬರುವಂತಹ ದಿನಗಳಲ್ಲಿ ಎಲ್ಲ ಕಡೆ ಬಿಜೆಪಿಯ ಕಮಲ ಅರಳಲಿದೆ ಎಂದು ತಿಳಿಸಿದರು. ಬಿಜೆಪಿ ಪರವಾದ ಈ ಅಲೆಯು ದೊಡ್ಡ ಶಕ್ತಿಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಅವರು ತಿಳಿಸಿದರು.
ಇದೊಂದು ಹೊಸ ದಿಕ್ಸೂಚಿ. ಈಗ ಪಕ್ಷ ಸೇರಿದ ಅರವಿಂದ ಪಾಟೀಲ್, ಲಿಂಗೇಶ್‍ಕುಮಾರ್ ಮತ್ತಿತರರು ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿಗಳು. ಹೀಗಾಗಿ ಪಕ್ಷ ಹೆಚ್ಚು ಬಲಯುತವಾಗಿ ಬೆಳೆಯಲಿದೆ. ಬಿಜೆಪಿ ಸಕಾರಾತ್ಮಕ ರಾಜಕೀಯ ಮಾಡುತ್ತದೆ. ಆಡಳಿತಕ್ಕೆ ಬಂದ ಬಳಿಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜನರಿಗಾಗಿ ಮೈಮುರಿದು ದುಡಿಯುತ್ತಿದ್ದೇವೆ ಎಂದು ತಿಳಿಸಿದರು. ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷವು ರಾಜ್ಯಾದ್ಯಂತ ದೃಢವಾಗಿ ಬೆಳೆದಿದೆ ಎಂದರು.
ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಜಿ ಶಾಸಕರಾದ ಅರವಿಂದ ಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು. ರಾಮನಗರ ಜಿಲ್ಲೆಯ ಮುಖಂಡರು ಹಾಗೂ ಬಮುಲ್ ಮಾಜಿ ನಿರ್ದೇಶಕರಾದ ಲಿಂಗೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹೆಚ್.ಎನ್.ಅಣ್ಣಯ್ಯ, ವಿಧಾನಪರಿಷತ್ ಮಾಜಿ ಸದಸ್ಯರಾದ ಮರಿಲಿಂಗೇಗೌಡರ ಮಕ್ಕಳಾದ ಗೌತಮ್, ಡಾ|| ವಿವೇಕಾನಂದ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಸಾದ್ ಗೌಡ (ಮಾಗಡಿ), ನಗರಸಭಾ ಮಾಜಿ ಸದಸ್ಯರಾದ ಕೃಷ್ಣೇಗೌಡ, ಗೋಪಾಲಕೃಷ್ಣ ಹಲವು ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರಿದರು.
ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ವಿಧಾನಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್, ಶಶಿಲ್ ಜಿ ನಮೋಶಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ಸಿದ್ದರಾಜು ಮತ್ತು ಮುಖಂಡರು, ಕಾರ್ಯಕರ್ತರು ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Be the first to comment