ರಾಜ್ಯ ಸುದ್ದಿಗಳು
ದೇವನಹಳ್ಳಿ
ಸತತವಾಗಿ ಸುರಿಯುತ್ತಿರುವ ಮಳೆ ಒಂದೆಡೆಯಾದರೆ, ಮತ್ತೊಂದೆಡೆ ಕೆರೆ ನೀರು ರಾಜಕಾಲೂವೆ ಅವೈಜ್ಞಾನಿಕದಿಂದಾಗಿ ರೈತರ ಬೆಳೆ ನೀರು ಪಾಲಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಸೋಲೂರು ಗ್ರಾಮದಲ್ಲಿ ನಡೆದಿದೆ. ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿಶ್ವನಾಥಪುರ ಕೆರೆಯಿಂದ ಸುಮಾರು 5 ಕಿಮೀ ದೂರದಲ್ಲಿರುವ ಸೋಲೂರು ಗ್ರಾಮದ ಕೆರೆಗೆ ಹಾದುಹೋಗುವ ರಾಜಕಾಲೂವೆ ಮಾರ್ಗದಲ್ಲಿನ ರೈತರ ಜಮೀನುಗಳಿಗೆ ಕೆರೆ ನೀರು ನುಗ್ಗಿ ಸಾಕಷ್ಟು ರಾಗಿ ಬೆಳೆ ನೀರು ಪಾಲಾಗಿದೆ. ಬೆಳೆ ಸಮೃದ್ಧವಾಗಿ ಬಂದಿದ್ದು, ಕೆರೆ ನೀರು ಮೊಣಕಾಲುದ್ದ ಹೊಲದಲ್ಲಿ ನಿಂತು ರೈತರಿಗೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ.
ಸುಮಾರು 25 ವರ್ಷದಿಂದ ವಿಶ್ವನಾಥಪುರ ಕೆರೆಯಿಂದ ಕೊಡಿ ಹರಿದು ಸೋಲೂರು ಕೆರೆಗೆ ಹೋಗುತ್ತಿತ್ತು. 2-3 ವರ್ಷಗಳಿಂದ 4 ಕಿಮೀ ಇದ್ದ ರಾಜಕಾಲೂವೆ ಒತ್ತುವರಿ ಸಮಸ್ಯೆಯಿಂದಾಗಿ ಇದೀಗ 3 ಕಿಮೀಗೆ ಬಂದಿದೆ. ರಾಜಕಾಲುವೆ ಅವೈಜ್ಞಾನಿಕವಾಗಿದ್ದು, ರಾಜಕಾಲುವೆಗೆ ದಿಬ್ಬವನ್ನು ಹಾಕಿರುವುದರಿಂದ ಸುತ್ತಮುತ್ತಲಿನಲ್ಲಿನ ರೈತರ ಸುಮಾರು ಎಕರೆಯಷ್ಟು ಬೆಳೆ ನಾಶವಾಗಿದೆ. ಇದರಿಂದ ರೈತರಿಗೆ ನಷ್ಟವಾಗಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು. ರಾಜಕಾಲೂವೆಯನ್ನು ಸರಿಯಾದ ರೀತಿಯಲ್ಲಿ ಗುರ್ತಿಸಿ ನೀರು ಜಮೀನುಗಳಿಗೆ ಬಾರದಂತೆ ಎಚ್ಚರವಹಿಸಬೇಕು ಎಂದು ಗ್ರಾಮದ ಜಮೀನಿನ ರೈತರ ಆಗ್ರಹವಾಗಿದೆ.
ಕಟಾವು ಹಂತಕ್ಕೆ ಬಂದಿರುವ ಸಾವಿರಾರು ಎಕರೆ ರಾಗಿ ಬೆಳೆ ನೀರಿಗೆ ಆಹುತಿಯಾಗಿರುವುದರಿಂದ ಬೆಳೆಯು ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಸರಿಯಾದ ರಾಜಕಾಲುವೆ ಇಲ್ಲದ ಪರಿಣಾಮ ಅಡ್ಡಾದಿಡ್ಡಿಯಾಗಿ ಇಡೀ ರಾಗಿ ಬೆಳೆ ಇಡಲಾಗಿದ್ದ ಜಮೀನುಗಳಿಗೆ ನೀರು ನುಗ್ಗಿರುವುದರಿಂದ ಸಾಕಷ್ಟು ನಷ್ಟವಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಸೋಲೂರು ರೈತ ಮನು ಆಗ್ರಹಿಸಿದ್ದಾರೆ.
Be the first to comment