ರಾಜ್ಯ ಸುದ್ದಿಗಳು
ದೇವನಹಳ್ಳಿ:
ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಕೊವಿಡ್ ಲಸಿಕೆಯೊಂದೆ ಮಾರ್ಗವಾಗಿರುವುದರಿಂದ ಸಾಕಷ್ಟು ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುತ್ತಮುತ್ತಲಿನ ಕ್ರಷರ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟಿನ ಸಾಕಷ್ಟು ಸಿಬ್ಬಂದಿಗಳು ಸೇರಿದಂತೆ, ಬಿಎಸ್‌ಎಫ್ ಯೋಧರು ಸಹ ಪಿಎಚ್‌ಸಿ ಆವರಣದಲ್ಲಿ ಲಸಿಕೆ ಪಡೆಯಲು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಲಸಿಕೆಗಾಗಿ ಬಂದಂತಹವರ ಹೆಸರು, ಆಧಾರ್‌ಕಾರ್ಡ್ ಮತ್ತು ಮೊಬೈಲ್ ನಂಬರ್‌ಗಳನ್ನು ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಂಡು ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿಗಳು ಮುಂದಾದರು.
ಕೆಲವರು ಮೊದಲನೇ ಡೋಸ್ ಪಡೆಯಲು ಆಗಮಿಸಿದ್ದರು. ಮತ್ತೇ ಕೆಲವರು ಎರಡನೇ ಡೋಸ್ ಪಡೆಯಲು ಆಗಮಿಸಿದ್ದರು. ಸುಮಾರು ೧೫೦ಕ್ಕೂ ಹೆಚ್ಚು ಜನರು ಕಾರಹಳ್ಳಿ ಸರ್ಕಲ್ ಮತ್ತು ಅಶ್ವತ್ಥ್‌ಕಟ್ಟೆ, ಆಸ್ಪತ್ರೆ ಆವರಣದಲ್ಲಿ ಗುಂಪಾಗಿ ನಿಂತಿದ್ದರು. ಸಾಮಾಜಿಕ ಅಂತರದಲ್ಲಿ ಸಾಲುಗಟ್ಟಿ ಲಸಿಕೆಯನ್ನು ಪಡೆಯಲು ಜನರು ಮುಂದಾದ ದೃಶ್ಯ ಕಂಡುಬಂದಿದೆ.
ಗ್ರಾಪಂಯಿಂದ ಸಲಹೆ:
ಲಸಿಕೆ ಹಾಕಿಸಿಕೊಳ್ಳುವ ಭರಾಟೆಯಲ್ಲಿ ಸಾಮಾಜಿಕ ಅಂತರ ಮರೆತು ಕೋವಿಡ್ ಹರಡುವ ಸಾಧ್ಯತೆ ಇದೆ ಎಂಬ ಭೀತಿಯಲ್ಲಿ ಕಾರಹಳ್ಳಿ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚು ಜನರು ಒಂದೇ ದಿನ ಲಸಿಕೆ ಪಡೆಯಲು ಆಗಮಿಸಿದ್ದರಿಂದ ಗ್ರಾಪಂ ವತಿಯಿಂದ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಸಲಹೆ ಮಾಡಿದರು. ತದನಂತರ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆಯನ್ನು ಪಡೆದುಕೊಳ್ಳಲು ಮುಂದಾದರು.
ಈ ವೇಳೆಯಲ್ಲಿ ಪಿಎಚ್‌ಸಿ ಲ್ಯಾಬ್‌ಟೆಕ್ನಿಷಿಯನ್ ಭಾನುಶ್ರೀ, ಆರೋಗ್ಯ ಸಿಬ್ಬಂದಿ ಮಮತಾ, ರತ್ನಮ್ಮ, ಮತ್ತಿತರರು ಇದ್ದರು.
Be the first to comment