ನ್ಯಾ.ಎ.ಜೆ.ಸದಾಶಿವ ವರದಿ ಒಳಮೀಸಲಾತಿ ಗೊಂದಲಕ್ಕೆ ಸರಕಾರ ಎಡೆಮಾಡಿಕೊಡುತ್ತಿದೆ: ಬಿಎಸ್‌ಪಿ ಆರೋಪ

 ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ:

CHETAN KENDULI

ನಿವೃತ್ತ ನ್ಯಾ.ಎ.ಜೆ.ಸದಾಶಿವರವರ ನೇತೃತ್ವದ ಆಯೋಗವು ಒಳಮೀಸಲಾತಿಗೆ ಸಂಬಂಧಿಸಿದಂತೆ, ಸೋರಿಕೆಯಾಗಿರುವ ಕೆಲವು ವಿಷಯಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಪರಿಶಿಷ್ಟ ಜಾತಿಗಳಾದ ಮಾದಿಗ, ಹೊಲೆಯ, ಭೋಮಿ, ಲಂಬಾಣಿ ಮತ್ತು ಕೊರಚ-ಕೊರಮರಲ್ಲಿ ಅನೇಕ ಗೊಂದಲಗಳಿಗೆ ಸರಕಾರ ಎಡೆ ಮಾಡಿಕೊಡುತ್ತಿದೆ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ವಾಗ್ವಾದ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಾಲಿ ಎಸ್‌ಸಿ ಪಟ್ಟಿಯಿಂದ ಭೋವಿ, ಲಂಬಾಣಿ, ಕೊರಮ-ಕೊರಚ ಮತ್ತಿತರ ಯಾವುದೇ ಜಾತಿಯನ್ನು ಯಾವುದೇ ಕಾರಣವನ್ನು ಮುಂದಿಟ್ಟು ಹೊರಹಾಕುವುದನ್ನು ವಿರೋಧಿಸುತ್ತೇವೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಮೀಸಲಾತಿಯ ಮಿತಿಯನ್ನು ಕ್ರಮವಾಗಿ ಶೇ.೧೫ ರಿಂದ ಶೇ.೧೭ಕ್ಕೂ, ಶೇ.೩ ರಿಂದ ಶೇ.೭ಕ್ಕೂ ಹೆಚ್ಚಿಸುವಂತೆ, ನಿವೃತ್ತ ನ್ಯಾ.ನಾಗಮೋಹನದಾಸ್ ಆಯೋಗವು ಸ್ಪಷ್ಟವಾಗಿ ಈಗಾಗಲೇ ಸರಕಾರಕ್ಕೆ ವರದಿ ನೀಡಿ ವರ್ಷ ಕಳೆದಿದ್ದರೂ, ವರದಿಯನ್ನು ಅಂಗೀಕರಿಸುವ ಬದಲಿಗೆ ಒಂದು ಉಪಸಮಿತಿಗೆ ವರ್ಗಾಯಿಸಿರುವುದು ಎಷ್ಟರ ಮಟ್ಟಿಗೆ ಸರಿ, ಕುರುಬರು ಮತ್ತು ಪಂಚಮಸಾಲಿಗಳು ನಡೆಸಿದ ಮೀಸಲಾತಿ ಸಂಬಂಧಿಸಿದ ಹೋರಾಟಗಳ ಪರಿಣಾಮವಾಗಿ, ಒಂದು ಉನ್ನತ ಸಮಿತಿಯನ್ನು ರಚಿಸಿದ ಸರಕಾರವು ಅದೇ ಉನ್ನತ ಸಮಿತಿಗೆ ನ್ಯಾ.ನಾಗಮೋಹನದಾಸ್ ಅವರ ವರದಿಯನ್ನು ಸಹಿತ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದೆ. ಸರಕಾರದ ಈ ನಡವಳಿಗೆ ಬಿಎಸ್‌ಪಿ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರಕಾರ ಈ ಕೂಡಲೇ ನ್ಯಾ.ನಾಗಮೋಹನದಾಸ್ ವರದಿಯನ್ನು ಉನ್ನತ ಸಮಿತಿಯಿಂದ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುತ್ತೇವೆ. ಜತೆಗೆ ೨೦೧೫ರಲ್ಲಿ ಜಾತಿ-ಜನಗಣತಿ ನಡೆಸಿದ ಕಾಂತರಾಜು ಆಯೋಗವು ತನ್ನ ವರದಿಯನ್ನು ಸರಕಾರಕ್ಕೆ ನೀಡಿದೆ. ಈ ವರದಿಯೂ ಸಹ ಇಂದಿಗೂ ಸದನದಲ್ಲಿ ಚರ್ಚೆಗೆ ಬಾರದೆ ಮೂಲೆ ಗುಂಪಾಗಿದೆ. ಇವೆಲ್ಲಾ ರಾಜಕೀಯ ಕುತಂತ್ರವಾಗಿದ್ದು, ಕೇವಲ ಮತಬ್ಯಾಂಕ್‌ಗಾಗಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕೂತ್ತಿರುವುದು ಮೀಸಲಾತಿ ವಂಚಿತರಿಗೆ ಕೆರಳಿಸುವಂತೆ ಮಾಡಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಗೆ ಸಂಬಂಧಿಸಿದಂತೆ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆಲ್ಲವೂ ಅತ್ಯಂತ ಬೇಜವಾಬ್ದಾರಿಯಾಗಿದ್ದು ಮತ್ತು ಘೋರ ನಿರ್ಲಕ್ಷ್ಯದೋರಣೆಯನ್ನು ಖಂಡಿಸುವಂತಹದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಪಕ್ಷದ ಸರಕಾರವಾಗಲೀ ಅಧಿಕಾರದಲ್ಲಿದ್ದಾಗ ಎಸ್‌ಸಿ/ಎಸ್‌ಟಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದ ಪಾಲಮ್ಮ (೨೫) ಮಹಿಳೆಯು ತನ್ನ ಮೇಲೆ ಅತ್ಯಾಚಾರ ನಡೆಯುವುದನ್ನು ಪ್ರತಿಭಟಿಸಿದಾಗ, ಆರೋಪಿ ಗಂಗಪ್ಪ ಮತ್ತಿತರರು ಆಕೆಯ ಮೇಲೆ ಪೆಟ್ರೋಲ್ ಸುರಿದು ಜೀವಂತ ಸುಟ್ಟಿರುವುದು ನಿದರ್ಶವಾಗಿದೆ. ಕ್ರೌರ್ಯದ ಪರಮಾವಧಿಯಾಗಿರುವ ಈ ಘಟನೆಯನ್ನು ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ದೌರ್ಜನ್ಯಕೋರರನ್ನು ನಿಗ್ರಹಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಂತಹ ಅಸಮರ್ಥ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸೇವೆಯಿಂದ ಆಮಾನತ್ತುಗೊಳಿಸಬೇಕು. ಜತೆಗೆ ಬೆಂಗಳೂರಿನ ಬಾಲಬ್ರೂಯಿ ಅತಿಥಿಗೃಹವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ರಾಷ್ಟ್ರೀಯ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗಾಂಧಿಜೀಯವರಲ್ಲದೆ, ರಾಷ್ಟ್ರ ಕವಿಗಳಾದ ರವೀಂದ್ರನಾಥ ಟಾಗೋರ್, ಬಹುಜನ ನಾಯಕ ಮಾನ್ಯವರ್ ಕಾನ್ಷಿರಾಮ್ ಬಂದು ತಂಗಿದ್ದ ಸ್ಥಳವಾಗಿದೆ. ಇಂತಹ ಅಥಿತಿಗೃಹವನ್ನು ಶಾಸಕರ ಕ್ಲಬ್ ಹೌಸ್ ಮಾಡಲು ಹೊರಟಿರುವ ರಾಜ್ಯ ಸರಕಾರದ ನಡೆಯು ಅತ್ಯಂತ ಖಂಡನೀಯವಾದದ್ದು, ಕೂಡಲೇ ಇಂತಹ ವಿರೋಧಿ ಕೆಲಸಗಳನ್ನು ಕೈಗೊಳ್ಳದೆ, ಸಮಾಜದ ಅಭಿವೃದ್ಧಿ ಮತ್ತು ಏಳಿಗೆಗೆ ಸರಕಾರಗಳು ಯೋಜನೆ ರೂಪಿಸುವಂತಾಗಬೇಕು ಎಂದು ಕಿಡಿಕಾರಿದರು.

ಈ ವೇಳೆಯಲ್ಲಿ ಬಿಎಸ್‌ಪಿ ರಾಜ್ಯ ಸಂಯೋಜಕ ಎಂ.ಗೋಪಿನಾಥ್, ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್, ಬಿಎಸ್‌ಪಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.

Be the first to comment

Leave a Reply

Your email address will not be published.


*