ರಾಜ್ಯ ಸುದ್ದಿಗಳು
ಮುಂಡಗೋಡ
ಪಟ್ಟಣದಲ್ಲಿ ಪರವಾನಿಗೆ ಇಲ್ಲದೆ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಾಲೂಕಾ ಆರೋಗ್ಯ ಅಧಿಕಾರಿ ಡಾ. ನರೇಂದ್ರ ಪವಾರ, ತಾಲೂಕಾಡಳಿತ ವೈದ್ಯಾಧಿಕಾರಿ ಡಾ. ಎಚ್. ಎಫ್. ಇಂಗಳೆ, ತಾಲೂಕಾ ಆಯುಷ್ಯ ವೈದ್ಯಾಧಿಕಾರಿ ಡಾ. ಸಂಜಯ ಗಲಗಲಿ, ಭಾರತಿಯ ವೈದ್ಯಕಿಯ ಸಂಘದ ತಾಲೂಕಾಧ್ಯಕ್ಷ ಡಾ. ರವಿ ಹೆಗಡೆ, ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಎಸ್. ಪಟ್ಟಣ ಶೆಟ್ಟಿ, ಪಿಎಸ್‌ಐ ಜಕ್ಕಣ್ಣವರ ನೇತೃತ್ವದ ತಂಡ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ.
ಪಟ್ಟಣದ ಬಂಕಾಪುರ ರಸ್ತೆಯಲ್ಲಿನ ಸಾಯಿನಾಥ ಎಂಬ ಹೆಸರಿನ ಆಸ್ಪತ್ರೆಗೆ ದಾಳಿ ನಡೆಸಿದಾಗ ಅಲ್ಲಿ ಅರ್ಧಾಂಗವಾಯು (ಪ್ಯಾರಾಲಸೀಸ್) ಆದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿತು ಬಿಎಎಂಎಸ್ ಓದಿರುವ ಪತ್ನಿಯ ಪ್ರಮಾಣ ಪತ್ರ ಇಟ್ಟುಕೊಂಡು ಪಿಯುಸಿ ಓದಿರುವ ಪತಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಂಡು ಅಧಿಕಾರಿಗಳ ತಂಡ ಹುಬ್ಬೇರಿಸಿತು. ಪಿಯುಸಿ ಓದಿ ಚಿಕಿತ್ಸೆ ನೀಡುತ್ತಿರುವ ಅಶೋಕ ಸಿಂದೆ ಮೇಲೆ ಪೊಲೀಸ್ ದೂರು ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ನಂತರ ನಂದಿಶ್ವರನಗರ ಕ್ರಾಸ್ ಬಳಿಯಿದ್ದ ರಾಜೇಂದ್ರಯ್ಯ ಆಸ್ಪತ್ರೆ ಯಾವುದೇ ಪ್ರಮಾಣ ಪತ್ರವಿಲ್ಲದೆ ನಡೆಸುತ್ತಿರುವುದನ್ನು ದಾಳಿ ನಡೆಸಿ ಬೆಳಕಿಗೆ ತಂದರು. ಅಲ್ಲದೇ ವೈದ್ಯ ರಾಜೇಂದ್ರಯ್ಯ ಮದ್ಯ ಕುಡಿದು ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಂಡು ಬಂದಿತು. ಮದ್ಯ ಕುಡಿದ ಬಾಟಲಿಗಳನ್ನು ಸಹ ಈ ವೈದ್ಯ ತನ್ನ ಕೊಠಡಿಯಲ್ಲಿ ಇಟ್ಟಿರುವುದು ಕಂಡ ಅಧಿಕಾರಿಗಳು ವೈದ್ಯನನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಮೂರು ರೋಗಿಗಳನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡುವುದು ಕಂಡು ಬಂದಿತು ಈತನ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ವಿವಿಧ ಕಡೆಗಳಲ್ಲಿ ದಾಳಿ ನಡೆದಿದ್ದು, ನಕಲಿ ವೈದ್ಯರ ಮೇಲೆ ದಾಳಿ ನಡೆದಿರುವ ಸುದ್ದಿ ತಿಳಿದ ಕೆಲವರು ತಮ್ಮ ಅನಧಿಕೃತ ಆಸ್ಪತ್ರೆಗಳಿಗೆ ಬೀಗ ಜಡಿದು ಪರಾರಿಯಾಗಿದ್ದಾರೆ.
Be the first to comment