ಅರಣ್ಯ ಇಲಾಖೆಯಲ್ಲಿ ಆನ್ ಲೈನ್ ಅಕ್ರಮ…! ಅಧಿಕಾರಿಗಳ ಪತ್ನಿಯರ ಅಕೌಂಟ್ ಗೆ ಗೂಗಲ್ ಪೇ, ಪೋನ್ ಪೇ ಮೂಲಕ ಲಂಚ…!!!

ವರದಿ: ಕುಮಾರ್ ನಾಯ್ಕ, ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಹುಬ್ಬಳ್ಳಿ:

CHETAN KENDULI

ಲಂಚ ಪಡೆದು ನೇಮಕಾತಿ ಆದೇಶ ನೀಡಿರುವ ಆರೋಪಕ್ಕೆ ಗುರಿಯಾಗಿರುವ ಅರಣ್ಯ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ವೇದಿಕೆಯಾಗಿದೆ.

ಅರಣ್ಯ ಇಲಾಖೆಯಲ್ಲಿ ಈಚೆಗೆ ನಡೆದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿರುವ ಕುರಿತು ಸಾಕಷ್ಟು ಆರೋಪ, ಪ್ರತ್ಯಾರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ. ಗೂಗಲ್ ಪೇ, ಪೋನ್ ಪೇ ಮೂಲಕ ಲಂಚ ಪಡೆದು ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಪುಷ್ಠಿ ನೀಡುವಂತಹ ಪುರಾವೆಗಳನ್ನಿಟ್ಟುಕೊಂಡೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ದೂರು ನೀಡಲಾಗಿದೆ.

117 ವಿವಿಧ ಹಂತದ ವಿವಿಧ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಆರಂಭಗೊಂಡಿತ್ತು. ಅರಣ್ಯ ಇಲಾಖೆಯಲ್ಲಿನ ನೇಮಕಾತಿ ಪ್ರಕ್ರಿಯೆ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳು ಲಂಚ ಪಡೆದು ನೇಮಕಾತಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಇನ್ನಿಲ್ಲದಂತೆ ಸದ್ದು ಮಾಡಿತ್ತು.

ನೇಮಕಾತಿ ಪ್ರಕ್ರಿಯೆ ವೇಳೆ ಹಿರಿಯ ಅಧಿಕಾರಿಗಳು ಪರೀಕ್ಷಾರ್ಥಿ ಅಭ್ಯರ್ಥಿಗಳಿಂದ ಗೂಗಲ್ ಪೇ, ಪೋನ್ ಪೇ ಮೂಲಕ ಲಂಚ ಪಡೆದು ನೇಮಕಾತಿ ಆದೇಶ ನೀಡಿರುವ ಆರೋಪವೂ ಸದ್ದು ಮಾಡಿತ್ತು. ಅಲ್ಲದೆ, ಪರೀಕ್ಷಾರ್ಥಿ ಅಭ್ಯರ್ಥಿಗಳೇ ಹಿರಿಯ ಅಧಿಕಾರಿಗಳಿಗೆ ಪೋನ್ ಪೇ, ಗೂಗಲ್ ಪೇ ಮೂಲಕ ಲಂಚ ನೀಡಿರುವ ಬಗ್ಗೆ ಆರೋಪಗಳ ಸುರಿ ಮಳೆಯನ್ನೇ ಮಾಡಿದ್ದರು.

ಪತ್ನಿಯರ ಖಾತೆಗೆ ಹಣ?

ಅರಣ್ಯ ಇಲಾಖೆಯಲ್ಲಿನ 117 ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವೇಳೆ ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಪತ್ನಿಯರುಗಳ ಅಕೌಂಟ್ ಗೆ ಪೋನ್ ಪೇ ಮೂಲಕ ಹಣ ಸಂದಾಯ ಮಾಡಿರುವುದಾಗಿ ಎಸಿಬಿ ಅಧಿಕಾರಿಗಳ ಎದುರು ಅಭ್ಯರ್ಥಿಗಳು ಲಿಖಿತ ದೂರು ನೀಡಿದ್ದಾರೆ. ಸದ್ಯ ರಾಜ್ಯಾದ್ಯಂತ ಭಾರೀ ಚರ್ಚೆಯಲ್ಲಿರುವ ಭ್ರಷ್ಟಾಚಾರದ ಅಂಶಗಳಲ್ಲಿ ಮುನ್ನೆಲೆಯಲ್ಲಿರುವುದೇ ಅರಣ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾಗುವ ಲಂಚ ಆರೋಪ.

ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಎಫ್ ಡಿಎ ಪ್ರಕಾಶ, ಕೃಪಾನಿಧಿ, ವ್ಯವಸ್ಥಾಪಕ ಉಮಾಶಂಕರ್ ಅಭ್ಯರ್ಥಿಗಳಿಂದ ಹಣ ಪಡೆದು ನೇಮಕಾತಿ ಪ್ರಕ್ರಿಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೆರಿಟ್ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡದೇ ಲಂಚ ಪಡೆದು ನೇಮಕಾತಿ ಮಾಡಿದ್ದಾರೆ ಎಂದು ವಕೀಲ ಸುರೇಂದ್ರ ಎಂಬುವರು ಎಸಿಬಿಗೆ ದೂರು ಸಹ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ನಡೆದಿರುವ ಈ ನೇಮಕಾತಿ ಪ್ರಕ್ರಿಯೆ ವಿರುದ್ಧ ಸಚಿವ ಉಮೇಶ ಕತ್ತಿ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.

ಆದರೆ, ಲಂಚ ಪಡೆದು ಅಕ್ರಮ ಎಸಗಿರುವ ಅರಣ್ಯ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಸಾಕ್ಷಿ ನಾಶ ಮಾಡುವ ಮುನ್ನ ಎಸಿಬಿ ಅಧಿಕಾರಿಗಳು ತನಿಖೆ ನಡೆಸಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತಮ್ಮ ಪತ್ನಿಯರ ಖಾತೆಗಳಿಗೆ ಹಣ ಪಡೆದುಕೊಂಡಿರುವ ಬಗ್ಗೆ ಹಣ ಸಂದಾಯ ಮಾಡಿರುವ ಪರೀಕ್ಷಾರ್ಥು ಅಭ್ಯರ್ಥಿಗಳೇ ಎಸಿಬಿಗೆ ದೂರು ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಿ ಅಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

-ರಫೀಕ್ ತೋರಗಲ್, ನ್ಯಾಯವಾದಿ.  

 

ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಯುವಕರು ಹಗಲು-ರಾತ್ರಿ ಎನ್ನದೇ ಓದಿನ ತಯಾರಿ ನಡೆಸಿರುತ್ತಾರೆ. ದೈಹಿಕ ತಯಾರಿಕೆಯನ್ನು ಮಾಡಿರುತ್ತಾರೆ. ಆದರೆ, ಹಣ ಇದ್ದವರು ಲಂಚ ನೀಡಿ ಉದ್ಯೋಗ ಪಡೆದುಕೊಳ್ಳುವುದಾದರೆ, ಆರ್ಥಿಕವಾಗಿ ಸಬಲರಲ್ಲದವರು ಎಲ್ಲಿಂದ ಹಣ ತರೋದು. ಪ್ರತಿಭೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ದೊರೆಬೇಕು. ಇಂತಹ ಅಕ್ರಮಕ್ಕೆ ಅವಕಾಶ ನೀಡಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

-ಶರಣಪ್ಪ ಚವ್ಹಾಣ, ಸಾಮಾಜಿಕ ಹೋರಾಟಗಾರ

Be the first to comment

Leave a Reply

Your email address will not be published.


*