ದೇವನಹಳ್ಳಿಯಲ್ಲಿ ನಡೆದ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ವರದಿ: ಗುರುಮೂರ್ತಿ ಬೂದಿಗೆರೆ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ:

CHETAN KENDULI

ಸ್ವಾತಂತ್ರ್ಯವೆಂಬುದು ನಮ್ಮ ದೇಶಕ್ಕೆ ಸುಲಭವಾಗಿ ಸಿಕ್ಕಿದಲ್ಲ, ಸಾವಿರಾರು ಮಂದಿ ದೇಶ ಭಕ್ತರ ಪ್ರಾಣತ್ಯಾಗ, ಬಲಿದಾನಗಳಿಂದ ಬಂದದ್ದು, ಅದನ್ನು ಉಳಿಸಿಕೊಂಡು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಕಲ್ಪನೆಯಲ್ಲಿ ನಾವೆಲ್ಲರೂ ಐಕ್ಯತೆಯಿಂದ ಈ ದೇಶವನ್ನು ಕಟ್ಟುವಂತಹ ಕೆಲಸ ಮಾಡಬೇಕಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ತೊಲಗಿಸಬೇಕು. ಸಾಮಾಜಿಕ ಅಭಿವೃದ್ಧಿಗೆ ಗಾಂಧೀಜಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ಪ್ರಜೆಯು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಕಡುಬಡವರು ಎದುರಿಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯ ತೊಲಗಿಸಬೇಕು.

ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.‌ ಕುಟುಂಬಗಳ ಮುಖ್ಯಸ್ಥರನ್ನು ಕಳೆದುಕೊಂಡಿದ್ದಾರೆ. ತಂದೆ, ತಾಯಿಯನ್ನು ಕಳೆದು ಮಕ್ಕಳು, 40 ಸಾವಿರಕ್ಕೂ ಹೆಚ್ಚು ಕುಟುಂಬಗಳವರು ಮರಣ ಹೊಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ತಡೆಗಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಸಾಕಷ್ಟು ಮಂದಿ ವೈದ್ಯಾಧಿಕಾರಿಗಳು, ಸೇರಿದಂತೆ ಮುಂಚೂಣಿ ಕಾರ್ಯಕರ್ತರು ತಮ್ಮ ಜೀವ ಪಣಕ್ಕಿಟ್ಟು ಹೋರಾಟ ನಡೆಸಿದ್ದಾರೆ. ಸರ್ಕಾರಗಳು ಜನರಿಗೆ ಉಚಿತವಾಗಿ ಲಸಿಕೆ ಕೊಡುತ್ತಿದೆ. ವೈಧ್ಯಕೀಯ ಸೌಲಭ್ಯಗಳ ಪೂರೈಕೆ ಮಾಡಲಾಗುತ್ತಿದೆ. ಅಮೃತ ಮಹೋತ್ಸವ ಹೆಸರಿನಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಎಲ್ಲರೂ ಜೊತೆಗೂಡಿ, ರಾಷ್ಟ್ರ ಕಟ್ಟಬೇಕಾಗಿದೆ ಎಂದರು.

ಮೂರನೇ ಅಲೆ ಎದುರಿಸಬೇಕು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗುತ್ತಿರುವ ಬಗ್ಗೆ ತಜ್ಞರು ಸೂಚನೆ ನೀಡಿದ್ದು, ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಗಂಭೀರವಾಗುತ್ತಿರುವುದರಿಂದ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಬೇಕು ಜನರು ಅದನ್ನು ಪಾಲನೆ ಮಾಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್, ಧರಿಸುವುದು, ಸ್ಯಾನಿಟೈಸರ್ ಹಾಕುವುದು, ಸರ್ಕಾರದೊಂದಿಗೆ ಸೋಂಕಿನ ನಿಯಂತ್ರಣಕ್ಕೆ ಸಕಲ ರೀತಿಯಲ್ಲೂ ಸಹಕಾರ ನೀಡಬೇಕು ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ನೆನೆಸುವಂತಹ ಕೆಲಸ ಮಾಡಬೇಕಾಗಿದೆ. 1857 ರಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮದಿಂದ 1947 ರಲ್ಲಿ ಸ್ವಾತಂತ್ರ್ಯ ಪಡೆಯುವ ತನಕ ಅನೇಕ ಮಹನೀಯರ ಪ್ರಾಣ ಬಲಿದಾನವಾಗಿದೆ. ಬ್ರಿಟೀಷರು ಸಂಪದ್ಭರಿತವಾದ ದೇಶವನ್ನು ಲೂಟಿ ಮಾಡಿದರು. ಅವರ ದುರಾಡಳಿತದ ವಿರುದ್ಧ ಹೋರಾಡಿದವರನ್ನು ನೆನಸಬೇಕು. ಮುಂದಿನ ಪೀಳಿಗೆಗೆ ವಿಚಾರ ತಿಳಿಸಬೇಕು. ಕೊರೊನಾದಿಂದಾಗಿ ದೇಶದ ಪ್ರತಿಯೊಬ್ಬ ಪ್ರಜೆ ಕಷ್ಟದಲ್ಲಿದ್ದಾರೆ. ಈ ರಾಷ್ಟ್ರದ ಉಳಿವಿಗಾಗಿ ನಾವು ಹೋರಾಡಬೇಕು. ಉಸ್ತುವಾರಿ ಸಚಿವರು ಕ್ಷೇತ್ರದ ಅಭಿವೃದ್ಧಿ ಹೆಚ್ಚು ಅನುದಾನ ಬಿಡುಗಡೆ ಮಾಡಿಕೊಡಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಹೋರಾಟ ನಡೆಸಿ, ಅನೇಕರ ಪ್ರಾಣಉಳಿಸುವಲ್ಲಿ ಯಶಸ್ವಿಯಾಗಿರುವ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಲಾಯಿತು. ತೆರೆದ ವಾಹನದಲ್ಲಿ ಪೊಲೀಸರಿಂದ ವಂದನೆ ಸ್ವೀಕರಿಸಿದರು. ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೊಲೀಸ್ ಪಡೆಗಳು, ಪಥಸಂಚಲನದ ಮೂಲಕ ದ್ವಜ ವಂದನೆ ಸಲ್ಲಿಸಿದರು.

ಮಕ್ಕಳಿಲ್ಲದೆ ಕುಗ್ಗಿದ ಸಂಭ್ರಮ: 75 ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ವೇಳೆ ಮೈದಾನದಲ್ಲಿ ಶಾಲಾ, ಕಾಲೇಜುಗಳ ಮಕ್ಕಳಿಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದ ಕಾರಣ, ಸರಳವಾಗಿ ಆಚರಣೆ ಮಾಡಿದ್ದರಿಂದ ಸ್ವಾತಂತ್ರ್ಯೋತ್ಸವದ ಸಂಭ್ರಮವಿರಲಿಲ್ಲ. ಕೇವಲ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೀಮಿತವಾಗಿತ್ತು.

 ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ರವಿಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೋ.ನ.ವಂಶಿಕೃಷ್ಣ, ಜಿಲ್ಲಾ ಯೋಜನಾ ನಿರ್ದೇಶಕಿ ಸುಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಪುರಸಭೆ ಅಧ್ಯಕ್ಷೆ ರೇಖಾವೇಣುಗೋಪಾಲ್, ಉಪಾಧ್ಯಕ್ಷೆ ಪುಷ್ಪಲತಾ, ಬೈಯಪಾ ಅಧ್ಯಕ್ಷ ಎ.ರವಿ, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಪಿಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜಿಲ್ಲಾ ಕೃಷಿ ನಿರ್ದೇಶಕಿ ವಿನುತಾ, ತೋಟಗಾರಿಕೆ ಇಲಾಖೆ ನಿರ್ದೇಶಕ ಮಹಾಂತೇಶ ಮುರುಗೋಡ, ಅರಣ್ಯ ಇಲಾಖೆಯ ಸುಬ್ಬರಾವ್, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪುರಸಭಾ ಸದಸ್ಯರು ಇದ್ದರು.

Be the first to comment

Leave a Reply

Your email address will not be published.


*