ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಉಡುಪಿಯ ನಿತ್ಯಾನಂದ ಕೆಮ್ಮಣ್ಣು ಅವರು ಕೋವಿಡ್-19 ಸೋಂಕಿಗೆ ಈಡಾಗಿದ್ದು ಅವರು ಶೀಘ್ರ ಗುಣಮುಖರಾಗಿ ಮತ್ತೇ ಕರಾಟೆ ಶಿಕ್ಷಕರ ಸಮಸ್ಯೆಗಳಿಗೆ ದನಿಯಾಗುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಶಾರದಳ್ಳಿಯವರು ಇಲ್ಲಿನ ದ್ಯಾಮವ್ವದೇವಿ ಮತ್ತು ದುರ್ಗಾದೇವಿಗೆ ಶುಕ್ರವಾರ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ನಿತ್ಯಾನಂದರು ಉಡುಪಿಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಕೋವಿಡ್-19 ಹಲವರನ್ನು ಬಲಿ ಪಡೆಯುತ್ತಿರುವುದುದರಿಂದ ಸಹಜವಾಗಿ ರಾಜ್ಯದ ಕರಾಟೆ ಶಿಕ್ಷಕರಲ್ಲಿ ಆತಂಕ ಇಮ್ಮಡಿಸಿದೆ. ನಿತ್ಯಾನಂದರು ಕಳೆದ ಕೆಲವು ವರ್ಷಗಳಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕರಾಟೆ ತರಬೇತಿ ನೀಡುವ ಯೋಜನೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. 2-3 ವರ್ಷ ಇದು ಜಾರಿಗೊಂಡು ರಾಜ್ಯದೆಲ್ಲೆಡೆ ಕರಾಟೆ ತರಬೇತಿ ಪಡೆದವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸತೊಡಗಿದ್ದರು. ಇದರಿಂದ ಕರಾಟೆ ಶಿಕ್ಷಕರ ಬಾಳಲ್ಲಿ ಉತ್ಸಾಹ ಮೂಡಿತ್ತು. ಆದರೆ ಈಗ ಸರ್ಕಾರ ತರಬೇತಿ ಬಂದ್ ಮಾಡಿದೆ. ಕೊರೊನಾದಿಂದಾಗಿ 2 ವರ್ಷಗಳಿಂದ ಈ ಬಗ್ಗೆ ಯಾವುದೇ ಪ್ರಸ್ತಾಪ ಇಲಾಖೆಯಲ್ಲಿ ನಡೆಯುತ್ತಿಲ್ಲ. ಇಡೀ ಶೈಕ್ಷಣಿಕ ವ್ಯವಸ್ಥೆ ತಿರುವು ಮುರುವಾಗಿದ್ದು ಇದಕ್ಕೆ ಕಾರಣವಿರಬಹುದು. ಆದರೂ ಕರಾಟೆ ಶಿಕ್ಷಕರ ಹಿತಕ್ಕಾಗಿ ನಿತ್ಯಾನಂದರು ಪಣ ತೊಟ್ಟಿದ್ದಾರೆ. ಅವರೊಬ್ಬ ರಾಜ್ಯ ಮಟ್ಟದ ದಕ್ಷ, ಪ್ರಭಾವಿ, ನಿಷ್ಠಾವಂತ ನಾಯಕರಾಗಿದ್ದು ಅವರು ಕೊರೊನಾದಿಂದ ಗುಣಮುಖರಾಗಿ ಮತ್ತೇ ಕರಾಟೆ ಶಿಕ್ಷಕರ ನೆರವಿಗೆ ಧಾವಿಸಲಿ ಎಂದು ಪ್ರಾರ್ಥಿಸಿ ರಾಜ್ಯದ ಎಲ್ಲ ಕರಾಟೆ ಶಿಕ್ಷಕರ ಪರವಾಗಿ ಪೂಜೆ ಸಲ್ಲಿಸಿದ್ದಾಗಿ ತಿಳಿಸಿದರು.
Be the first to comment