ಜಿಲ್ಲಾ ಸುದ್ದಿಗಳು
ಶಿರಸಿ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮುತುವರ್ಜಿಯಿಂದ ವಸತಿ ಇಲಾಖೆ ಹೊಸ ಆದೇಶ ಮಾಡಿದ್ದು, ಆ ಪ್ರಕಾರ 2013ಕ್ಕಿಂತ ಪೂರ್ವ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡವರು, ಮನೆ ನಂಬರ್ ಹೊಂದಿರುವವರು, ಪಂಚಾಯಿತಿಗೆ ಕರ ತುಂಬುತ್ತಿರುವವರು ವಿವಿಧ ವಸತಿ ಯೋಜನೆಯ ಫಲ ಪಡೆಯಬಹುದಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸದಾನಂದ ಭಟ್ಟ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಅರಣ್ಯ ಅತಿಕ್ರಮಣ ಪ್ರದೇಶದಲ್ಲಿ ಕಾನೂನು ತೊಡಕಿನಿಂದ ಮನೆ ಕಟ್ಟಿಕೊಳ್ಳಲು ಆಗದವರಿಗೆ ಪಂಚಾಯಿತಿಗಳಿಗೆ ಯೋಜನೆಯಡಿ ಲಭ್ಯವಿರುವ ಮನೆಗಳನ್ನು ಆದ್ಯತೆಯ ಮೇರೆಗೆ ನೀಡಲು ಸರ್ಕಾರ ಈ ಕ್ರಮ ಅನುಸರಿಸಿದ್ದು, ಯಾರು ಕೂಡ ಅತಿಕ್ರಮಣದಾರರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡಬಾರದು ಎಂದರು.ಉತ್ತರ ಕನ್ನಡ ಜಿಲ್ಲೆ ಅರಣ್ಯ ಜಿಲ್ಲೆಯಾಗಿದೆ. ಇಲ್ಲಿ ಸರ್ಕಾರಿ ಜಮೀನು ಪ್ರಮಾಣ ಕಡಿಮೆ. ಅರಣ್ಯ ಅತಿಕ್ರಮಣದಾರರೇ ಹೆಚ್ಚಿರುವ ಇಲ್ಲಿ ಸರ್ಕಾರದ ವಸತಿ ಯೋಜನೆ ಸೌಲಭ್ಯದಿಂದ ದೂರ ಉಳಿದಿದ್ದರು. ಗ್ರಾಮೀಣ ಭಾಗದಲ್ಲಿ ಸರ್ಕಾರದ ವಸತಿ ಯೋಜನೆಗಳು ಅನುಷ್ಠಾನವಾಗುತ್ತಿದ್ದರೂ, ಅರಣ್ಯ ಅತಿಕ್ರಮಣ ಜಾಗದಲ್ಲಿರುವವರಿಗೆ ಇದರ ಸೌಲಭ್ಯ ಸಿಗುತ್ತಿರಲಿಲ್ಲ. ಹೀಗಾಗಿ ಹಲವರು ವಸತಿ ಇಲ್ಲದೆ ಕಂಗಾಲಾಗಿದ್ದರು. ಪಂಚಾಯಿತಿ ವತಿಯಿಂದ ಮನೆ ನಂಬರ್ ನೀಡಲಾಗಿದೆ. ಕರ ಸಂಗ್ರಹ ಮಾಡಲಾಗುತ್ತಿದೆ. ಆದರೆ ಕಾನೂನು ತೊಡಕಿನಿಂದ ವಸತಿ ಯೋಜನೆ ಸೌಲಭ್ಯ ನೀಡಲು ಆಗುತ್ತಿರಲಿಲ್ಲ. ಆದರೆ ಈಗ ಎಲ್ಲರಿಗೂ ಅನುಕೂಲ ಆಗಲಿದೆ ಎಂದರು.
2012ರ ಸರ್ಕಾರದ ಆದೇಶದ ಪ್ರಕಾರ ವಸತಿ ಸೌಲಭ್ಯ ಪಡೆಯಲು ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಕಡ್ಡಾಯವಾಗಿತ್ತು. ಅದರಿಂದಾಗಿ ಅರಣ್ಯ ಅತಿಕ್ರಮಣದಲ್ಲಿರುವವರು ನೋಂದಣಿಗೆ ಪರದಾಡುವ ಪರಿಸ್ಥಿತಿಯಿತ್ತು. ಆದರೆ ಈಗ ನೋಂದಣಿಯ ಅಗತ್ಯವಿಲ್ಲ. ಭೂಮಿಯ ಹಕ್ಕಿನ ವಿಚಾರ ಹಾಗೂ ವಸತಿ ಯೋಜನೆ ವಿಚಾರಗಳು ಪ್ರತ್ಯೇಕವಾಗಿದ್ದು, ಫಲಾನುಭವಿಗೆ ಸಹಾಯಧನ ನೀಡುವ ಯೋಜನೆ ಇದಾಗಿದೆ. ಯಾರೂ ಗೊಂದಲ ಸೃಷ್ಟಿಸುವ ಕಾರ್ಯ ಮಾಡಬಾರದು. ಆ ಮೂಲಕ ಜನರಿಗೆ ಸೌಲಭ್ಯ ತಪ್ಪಿಸುವ ಕೆಲಸ ಮಾಡಬಾರದು ಎಂದು ಹೇಳಿದರು.ಈ ವೇಳೆ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಾದ ನರಸಿಂಹ ಹೆಗಡೆ, ಶೋಭಾ ನಾಯ್ಕ, ಡಾನಿ ಡಿಸೋಜಾ, ಪಾಂಡುರಂಗ ನಾಯ್ಕ, ಸತೀಶ ನಾಯ್ಕ ಇತರರಿದ್ದರು.ಅನೇಕ ವಸತಿ ಯೋಜನೆಗಳು ಸರ್ಕಾರ ನೀಡುತ್ತಿದ್ದರೂ ಕಡು ಬಡವರಿಗೆ ಸಿಗುತ್ತಿರಲಿಲ್ಲ. ಅತಿಕ್ರಮಣದಲ್ಲಿ ಮನೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ವಿಧಾನಸಭಾಧ್ಯಕ್ಷರ ಪ್ರಯತ್ನದ ಮೇರೆಗೆ ಹೊಸ ಆಶ್ರಯ ಮನೆ ನೀಡುವಾಗ ಮನೆ ನಂ. ಇದ್ದಲ್ಲಿ ನೀಡಬಹುದು ಎಂದು ಆದೇಶ ಬಂದಿತ್ತು, ಇದರಿಂದ ಎಲ್ಲರಿಗೂ ಅನುಕೂಲ ಆಗಲಿದೆ. ನರಸಿಂಹ ಹೆಗಡೆ ಬಕ್ಕಳ, ಬಿಜೆಪಿ ತಾಲೂಕಾಧ್ಯಕ್ಷ.
Be the first to comment