ಜಿಲ್ಲಾ ಸುದ್ದಿಗಳು
ಶಿರಸಿ
ಅಭಿವೃದ್ಧಿ ಶಿರಸಿಯಲ್ಲಿ ಮಿಂಚಿನಂತೆ ಸಂಚರಿಸುತ್ತಿದೆ. ಕೊರೋನಾ ಸೊಂಕಿನಿಂದ ಕಾಪಾಡಿಕೊಳ್ಳಲಿಕ್ಕಾಗಿ ಕೇಂದ್ರ ಸರ್ಕಾರ ಸಂಪೂರ್ಣ ಉಚಿತವಾಗಿ ಲಸಿಕೆ ನೀಡುತ್ತಿದೆ. ಶಿರಸಿಯಲ್ಲಿ ವ್ಯಾಕ್ಸಿನ್ ಇಲ್ಲವಷ್ಟೆ ಮತ್ತೇನು ಸಮಸ್ಯೆ ಇಲ್ಲ.ಶಿರಸಿಯ ಹಳೆಯ ಬಸ್ ನಿಲ್ದಾಣ ಕೆಡವಿ ಹೊಚ್ಚ ಹೊಸ ಬಸ್ ನಿಲ್ದಾಣ ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿರ್ಮಾಣವಾಗಲಿದೆ.
ಶಿರಸಿ ಕುಮಟಾ ಹೆದ್ದಾರಿಯ ಕಾಮಗಾರಿ ಶರವೇಗದಲ್ಲಿ ನಿರ್ಮಾಣವಾಗುತ್ತಿದೆ. ಪ್ರತೀ ವಾರಕ್ಕೆ ಒಂದು ಇಂಚಿನಷ್ಟು ರಸ್ತೆ ನಿರ್ಮಾಣ ಪ್ರಗತಿಯಲ್ಲಿದ್ದು, ಕೇವಲ ಎರಡು ವರ್ಷದಲ್ಲಿ ಸಂಪೂರ್ಣ 10*10 ಇಂಚು ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ.
ಹೀಗೆ ಶಿರಸಿಯ ಅಭಿವೃದ್ಧಿಯ ವೇಗ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಜಗತ್ತಿನ ಮೂಲೆ ಮೂಲೆಯಿಂದ ಶಿರಸಿ ಕುಮಟಾ ರಸ್ತೆ ಅಗಲಿಕರಣ ಕಾಮಗಾರಿ ವೀಕ್ಷಿಸಲು ಜನಸಾಗರವೇ ಬರುತ್ತಲಿದೆ. ಕೇವಲ ಎರಡು ವರ್ಷದಲ್ಲಿ ಸುಸಜ್ಜಿತ ರಸ್ತೆ ನಮ್ಮ್ಮ ಕಣ್ಣೆದುರಿಗೆ ಬರಲಿದೆ.ಸದ್ಯ ಹೊಂಡಮಯವಾದ ರಸ್ತೆ ಇದ್ದರೂ ಸಹ ಮತ್ತೇನು ಸಮಸ್ಯೆ ಇಲ್ಲ. ಒಂದೊಂದೇ ವಾಹನ ಓಡಾಡಿದರೆ ಮಾತ್ರ ಧೂಳು ಇಡೀ ಪರಿಸರ ಪಸರಿಸುತ್ತದೆಯೇ ಹೊರತು ಮತ್ತೇನು ಸಮಸ್ಯೆ ಇಲ್ಲ. ಈಗ ಕೇವಲ ಐದಾರು ಕಿ.ಮೀ ಮಾತ್ರ ಇಂತಹ ಸಮಸ್ಯೆಗೆ ಕಾರಣವಾಗಿದ್ದು ಹಲವು ಅಧಿಕಾರಿಗಳ ನಿದ್ದೆ ಕೆಡಿಸಿದೆ. ಹಾಗಾಗಿ ಶಿರಸಿಯಿಂದ ಕುಮಟಾ ತನಕದ 60ಕಿ.ಮೀ. ರಸ್ತೆಯನ್ನೂ ಇದೇ ರೀತಿ ಹಳೆಯ ಡಾಂಬರ್ ಕಿತ್ತು, ಮಣ್ಣಿನ ರಸ್ತೆ ನಿರ್ಮಿಸಿ, ಹೊಂಡಗುಂಡಿ ಸೃಷ್ಟಿಸಿಕೊಡಿ ಎಂದು ಜನರು ದುಂಬಾಲು ಬಿದ್ದಿದ್ದಾರೆ.
ಶಿರಸಿಯಲ್ಲಿ ಆಡಳಿತ ವ್ಯವಸ್ಥೆ ಎಲ್ಲಿದೆ ಎಂದು ಹುಡುಕುವ ಯಾವ ಪ್ರಯತ್ನವೂ ಬೇಡವೇ ಬೇಡ. ಸಿಗುವುದು ಕಷ್ಟವಲ್ಲದಿದ್ದರೂ, ಕೈಗೆ ಮಾತ್ರ ಸಿಗದು. ಎಲ್ಲಿದ್ದೀರಿ ಅಧಿಕಾರಿಗಳೇ? ಎಲ್ಲಿದ್ದೀರಿ ರಾಜಕಾರಣಿಗಳೇ ಎಂದು ಪ್ರಶ್ನೆ ಕೇಳಿ ಗಂಟಲು ಒಣಗಿಸಿಕೊಳ್ಳುವ ಬದಲು, ಮನೆಯಿಂದ ಹೊರ ಬೀಳದೇ ಕೊರೋನಾ ಸೊಂಕನ್ನು ತಡೆಗಟ್ಟಿ ಎಂದು ನಿಮ್ಮಲ್ಲಿ ಕಳಕಳಿಯ ಮನವಿ.
Be the first to comment