ತಹಶೀಲ್ದಾರ್ ಹುದ್ದೆಗೆ ಕಂದಾಯ ಇಲಾಖೆಯ ಅಧಿಕಾರಿಗಳನ್ನೇ ನಿಯೋಜಿಸಿ

ವರದಿ: ಹೈದರ್‌ಸಾಬ್, ಕುಂದಾಣ

ರಾಜ್ಯ ಸುದ್ದಿ

CHETAN KENDULI

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ | ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖೆಯ ನೌಕರರ ಸಂಘದಿಂದ ಒತ್ತಾಯದೇವನಹಳ್ಳಿ: ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಯು ಒಂದು ತಾಲೂಕಿನ ಮ್ಯಾಜಿಸ್ಟ್ರಿಯಲ್ ಅಧಿಕಾರ ಹೊಂದಿರುವ ಹುದ್ದೆಯಾಗಿದೆ. ಈ ಹುದ್ದೆಗೆ ಬೇರೆ ಇಲಾಖೆಯ ಅಧಿಕಾರಿಗಳನ್ನು ನೇಮಿಸಬಾರದೆಂದು ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖೆಯ ನೌಕರರ ಸಂಘದ ಪದಾಧಿಕಾರಿಗಳು ಸರಕಾರಕ್ಕೆ ಒತ್ತಾಯಿಸಿದರು.

ದೇವನಹಳ್ಳಿ ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಾನ್ಫರೆನ್ಸ್ ಹಾಲ್‌ನಲ್ಲಿ ಜಿಲ್ಲಾ ಸರಕಾರಿ ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕೆ.ನಾಗರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ ೧೯೭೮ರ (೪)ನೇ ನಿಯಮ ೧೬-ಎಗೆ ತಿದ್ದುಪಡಿ ಮಾಡಿರುವಂತೆ, ಬೇರೆ ಇಲಾಖೆಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಬಾರದಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು. ಕರ್ನಾಟಕ ಸರಕಾರದ ಸಚಿವ ಸಂಪುಟದ ಪ್ರಕರಣ ಸಂಖ್ಯೆಸಿ.೧೬೧/೨೦೨೧, ಏ.೨೬ರಂದು ಸಚಿವಾಲಯ ಸೇರಿದಂತೆ ಸರಕಾರದ ಇತರೆ ಇಲಾಖೆಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ನಿಯೋಜನೆ ಮೇಲೆ ನೀಮಿಸಬಾರದೆಂದು ತೀರ್ಮಾನಿಸಿರುವ ಕುರಿತು ಅಧಿಸೂಚನೆಯನ್ನು ಗಮನಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿರುವುದನ್ನು ಗಮನಿಸಿ, ಇಡೀ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ನೌಕರರ ಸಂಘವು ಮನವಿ ನೀಡಲು ಮುಂದಾಗಿದೆ. ಒಟ್ಟು ೬೩೪ ಹುದ್ದೆಗಳಿದ್ದು, ಇದರಲ್ಲಿ ಮುಂಬಡ್ತಿ ಹುದ್ದೆ ಶೇ.೫೦ರಷ್ಟು ಹಾಗೂ ನೇರ ನೇಮಕಾತಿ ಹುದ್ದೆ ಶೇ.೫೦ ಇರುವುದರಿಂದ ಈ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ತಹಶೀಲ್ದಾರ್ ಹುದ್ದೆಗೆ ನೇಮಕಾತಿ ಮಾಡುವುದರಿಂದ ನಮ್ಮ ಮೂಲ ಕಂದಾಯ ಇಲಾಖೆಯ ನೌಕರರಾದ ಗ್ರಾಮ ಲೆಕ್ಕಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು, ರಾಜಸ್ವ ನಿರೀಕ್ಷಕರು, ಶಿರಸ್ಥೆದಾರರು ಹಾಗೂ ಉಪತಹಶೀಲ್ದಾರ್‌ರವರು ಸಾವಿರಾರು ಸಂಖ್ಯೆಯಲ್ಲಿ ಸುಮಾರು ೩೫-೪೦ ವರ್ಷ ಸೇವೆ ಸಲ್ಲಿಸಿದ್ದರೂ ಸಹ ಮುಂಬಡ್ತಿಯಿಂದ ವಂಚಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಶೇ.೫೦ ಹುದ್ದೆಗಳು ಮೂಲ ಕಂದಾಯ ಇಲಾಖೆಯ ಆಡಳಿತ ಇಲಾಖೆಯಾಗಿರುವುದರಿಂದ ಅನ್ಯ ಇಲಾಖೆಯಿಂದ ಬರುವವರಿಗೆ ತಹಶೀಲ್ದಾರ್ ಹುದ್ದೆಗೆ ನೇಮಿಸುವುದು ದುರದೃಷ್ಟಕರವಾಗಿದೆ. ಬೇರೆ ಇಲಾಖೆಯಿಂದ ಬಂದಂತಹ ಅಧಿಕಾರಿಗಳು ಸುಮಾರು ೭-೮ ವರ್ಷಗಳಿಂದ ಸತತವಾಗಿ ತಹಶೀಲ್ದಾರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರುಗಳನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಈಗಾಗಲೇ ಸರಕಾರದ ಸಚಿವ ಸಂಪುಟವು ತೀರ್ಮಾನಿಸಿರುವುದು ಸರಿಯಾಗಿರುವುದರಿಂದ ಈ ತೀರ್ಮಾನ ಅಂತಿಮ ಅಧಿಸೂಚನೆ ಹೊರಡಿಸಿ, ನಿಯೋಜನೆಯ ಮೇಲೆ ಅನ್ಯ ಇಲಾಖೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ತಹಶಿಲ್ದಾರ್ ರವರುಗಳನ್ನು ಬಿಡುಗಡೆಗೊಳಿಸಿ ಆ ಜಾಗಲ್ಲೆ ಕಂದಾಯ ಇಲಾಖೆಯ ಅಧಿಕಾರಿಗಳನ್ನೇ ನೇಮಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ಅಧಿಕಾರಿ ಅರುಳ್‌ಕುಮಾರ್, ರಾಜ್ಯ ಉಪಾಧ್ಯಕ್ಷ ಬಿ.ಶಿವಕುಮಾರ್, ನೆಲಮಂಗಲ ತಾಲೂಕು ಅಧ್ಯಕ್ಷ ಬಿ.ಸುಧೀರ್, ದೊಡ್ಡಬಳ್ಳಾಪುರ ತಾಲೂಕು ಗ್ರಾಮ ಲೆಕ್ಕಿಗರ ಅಧ್ಯಕ್ಷ ಸುಂದರ್‌ರಾಜ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಪ್ರಕಾಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಆನಂದ್, ದೇವನಹಳ್ಳಿ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ರಂಗನಾಥ್, ಕಂದಾಯ ಇಲಾಖೆಯ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*