ಜಿಲ್ಲಾ ಸುದ್ದಿಗಳು
ಶಿರಸಿ
ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸುತ್ತಿರುವ ವಿದ್ಯುತ್ ಖಾಸಗೀಕರಣ ಹೊಸ ಕಾನೂನು ರೈತ ವಿರೋಧಿ ನೀತಿಯಾಗಿದ್ದು, ಸದ್ರಿ ಕಾನೂನು ಜಾರಿಗೆ ಬಂದಲ್ಲಿ ಇಗಾಗಲೇ ಉಚಿತವಾಗಿ ನೀಡುತ್ತಿರುವ ಕೃಷಿ ಪಂಪ್‍ಸೆಟ್ಟಿಗೂ ಶುಲ್ಕ ತುಂಬಬೇಕಾಗುವುದರಿಂದ ಸರಕಾರವು ತಕ್ಷಣ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಭೂಮಿ ಹಕ್ಕು ಹೋರಾಟಗಾರರು ರೈತರಿಗೆ ಉಚಿತ ಪಂಪ್‍ಸೆಟ್ ನೀಡಿದ ದಿ.ಬಂಗಾರಪ್ಪನವರ ಪೋಟೋ ಪ್ರದರ್ಶಿಸಿ ಪ್ರತಿಭಟಿಸಿದರು.ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಶಿರಸಿ ತಾಲೂಕಿನ ಕಂಡ್ರಾಜಿ ಗ್ರಾಮದಲ್ಲಿ ರೈತ ಮುಖಂಡರೊಂದಿಗೆ ಪಂಪ್‍ಸೆಟ್‍ಮನೆ ಎದುರು, ಕರ್ನಾಟಕದಲ್ಲಿ ರಾಜ್ಯದ ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಿದ ಮಾಜಿ ಮುಖ್ಯಮಂತ್ರಿ ದಿ|| ಬಂಗಾರಪ್ಪನವರ ಪೋಟೋ ಪ್ರದರ್ಶಿಸುತ್ತಾ ವಿನೂತ ರೀತಿಯ ಪ್ರತಿಭಟನೆಯನ್ನು ಇಂದು ಜರುಗಿಸಿರುವದು ಪ್ರತಿಭಟನೆಯ ವಿಶೇಷವಾಗಿತ್ತು.ಕೇಂದ್ರ ಸರಕಾರವು ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೆ ತಂದಲ್ಲಿ ಕೃಷಿ ಪಂಪ್‍ಸೆಟ್, ಭಾಗ್ಯಜ್ಯೋತಿ, ಕುಟೀರಜ್ಯೋತಿ, ಬೀದಿದೀಪ, ನೀರು ಸರಬರಾಜಿಗೆ ನೀಡುತ್ತಿರುವ ವಿದ್ಯುತ್‍ಗೆ ಶುಲ್ಕಭರಿಸುವದು ಕಡ್ಡಾಯ ಆಗಿರುವುದರಿಂದ ರೈತ ಮತ್ತು ಆರ್ಥಿಕ ಹಿಂದುಳಿದವರಿಗೆ ತುಂಬಲಾರದಷ್ಟು ನಷ್ಟ ಉಂಟಾಗುವುದು. ಸದ್ರಿ ಕಾಯಿದೆಯು ರೈತರಿಗೆ ಮಾರಕವಾಗಿರುವುದರಿಂದ ಹಿಂದಕ್ಕೆ ಪಡೆಯಲು ಆಗ್ರಹಿಸಲಾಗುತ್ತಿದೆ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.ರೈತರ ಆರ್ಥಿಕ ವ್ಯವಸ್ಥೆಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರವು ಜಾರಿಗೆ ತರಲು ಉದ್ದೇಶಿಸಿದ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೆ ಬಂದಲ್ಲಿ ರೈತರ ಜೀವನದ ಆರ್ಥಿಕ ಮಟ್ಟ ಸಂಪೂರ್ಣ ಕುಸಿಯುವುದರಲ್ಲಿ ಸಂಶಯವಿಲ್ಲ ಎಂದು ರವೀಂದ್ರ ನಾಯ್ಕ ಹೇಳಿದರು.ಗಾಯದ ಮೇಲೆ ಬರೆ:
ಇಗಾಗಲೇ ರೈತರು ಅತೀವೃಷ್ಟಿ ಮತ್ತು ಬರಗಾಲದಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರವು ಇಗಾಗಲೇ ರೈತ ವಿರೋಧಿ ಮೂರು ಕಾನೂನುಗಳು ಜಾರಿಗೆ ತಂದಿದ್ದು, ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೆ ಬಂದಲ್ಲಿ ಬಡ ರೈತನ ಗಾಯದ ಮೇಲೆ ಬರೆ ಎಳೆದಂತಾಗುವುದು. ತಕ್ಷಣ ಸರಕಾರ ವಿದ್ಯುತ್ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಬೇಕೆಂದು ಪ್ರಗತಿ ಪರ ರೈತ ವೆಂಕಟೇಶ ಬೈಂದೂರ್, ಬಿಸಲಕೊಪ್ಪ ಈ ಸಂದರ್ಭದಲ್ಲಿ ಹೇಳಿದರು.ಈ ಸಂದರ್ಭದಲ್ಲಿ ಬಂಕನಾಳ ಗ್ರಾಮ ಪಂಚಾಯತ ಅಧ್ಯಕ್ಷ ಬೆಲ್ಲ ಗೌಡ, ವೆಂಕಟೇಶ ಬೈಂದೂರ, ಎಮ್ ಆರ್ ನಾಯ್ಕ ಕಂಡ್ರಾಜಿ, ಮೋಹನ ನಾಯ್ಕ ಅಂಡಗಿ, ನೆಹರೂ ನಾಯ್ಕ ಬಿಳೂರು, ಬಿಸಿ ನಾಯ್ಕ ಕಲಕರಡಿ, ಸುರೇಶ ನಾಯ್ಕ, ಸಿ ಆರ್ ನಾಯ್ಕ, ಚಂದ್ರು ಗೊಂದಳಿ, ಇಬ್ರಾಹಿಂ ಸಾಬ ಕಂಡ್ರಾಜಿ, ಹರೀಶ ನಾಯ್ಕ, ಎಮ್ ಕೆ ನಾಯ್ಕ, ಅಬ್ದುಲ್ ರೆಹೆಮಾನ ಮುಂತಾದವರು ಉಪಸ್ಥಿತರಿದ್ದರು.
Be the first to comment