ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ರೈತರ ಜಮೀನಿಗೆ ಅನುಕೂಲವಾಗಲೆಂದು ಲ್ಯಾಟರಲ್ ಕಾಲುವೆಗಳನ್ನು ನಿರ್ಮಿಸುತ್ತಿದ್ದ ಕಾಲುವೆಯು ಗುತ್ತಿಗೆದಾರರು ಸಂಪೂರ್ಣ ಕಳಪೆಮಟ್ಟದಿಂದ ಮಾಡಿದ್ದು ಮುದ್ದೇಬಿಹಾಳ ತಾಲೂಕಿನ ಗರಸಂಗಿ ಗ್ರಾಮದ ರೈತರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹೌದು, ನಾರಾಯಣಪೂರ ಹಾಗೂ ಆಲಮಟ್ಟಿ ಜಲಾಶಯದ ನೀರು ಹರಿವಿಗಾಗಿ ಮುದ್ದೇಬಿಹಾಳ ತಾಲೂಕಿನ ಗರಸಂಗಿ ಗ್ರಾಮದ ರೈತರು ಕಳೆದುಕೊಂಡ ಜಮೀನು ಬರೊಬ್ಬರಿ 1200 ಎಕ್ಕರೆ ಜಮೀನು. ದೊಡ್ಡ ಪ್ರಮಾನದಲ್ಲಿ ಜಮೀನು ಕಳೆದುಕೊಂಡಿರುವ ರೈತರಿಗೆ ಇನ್ನೂಳಿದ ಜಮೀನಿಗೆ ನೀರು ಒದಗಿಸಬೇಕಾದಂತಹ ಕೆಬಿಜೆಎನ್ಎಲ್ ಅಧಿಕಾರಿಗಳು ಮಾತ್ರ ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಕಳಪೆಮಟ್ಟದ ಕಾಲುವೆಗಳನ್ನು ನಿರ್ಮಿಸುತ್ತಿದ್ದಾರೆ ಎನ್ನುವುದು ರೈತರ ಆರೋಪವಾಗಿದೆ.
ಈಗಾಗಲೇ ಕೊರೊನಾ ಸಂಕಷ್ಟದಲ್ಲಿ ರೈತರು ಸಾಕಷ್ಟು ದುಸ್ಥಿತಿಗಳನ್ನು ಎದುರಿಸಿದ್ದಾರೆ. ಈಗಲಾದರೂ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಸೂಕ್ತವಾದ ನೀರು ಸಿಕ್ಕಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾತ್ರ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದ್ದಾರೆ.
ಕಳಪೆ ಕಾಲುವೆ ನಿರ್ಮಾಣ:
ಮುದ್ದೇಬಿಹಾಳ ತಾಲೂಕಿನ ಗರಸಂಗಿ ಗ್ರಾಮ ವ್ಯಾಪ್ತಿಯ ರೈತರ ಜಮೀನಿನಲ್ಲಿ ನಿರ್ಮಿಸಲಾಗುತ್ತಿರುವ ಲ್ಯಾಟರಲ್ ಕಾಲುವೆಗಳಿಗೆ ಗುತ್ತಿಗೆದಾರರು ಸರಿಯಾದ ಪ್ರಮಾನದಲ್ಲಿ ಸಿಮೆಂಟ್ ಹಾಗೂ ಮರಳು ಹಾಕದೇ ಕೇವಲ ಎಂಸ್ಯಾಂಡ್ ಹಾಕಿ ಕಾಲುವೆ ನಿರ್ಮಾಣ ಮಾಡುತ್ತಿದ್ದಾರೆ. ಇದರ ಬಗ್ಗೆ ಪ್ರಶ್ನಿಸಲು ಹೋದರೆ ರೈತರ ಮಾತಿಗೆ ಕವಡೆ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಇನ್ನೂ ಇದರ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳೂ ರೈತರ ಮಾತಿಗೆ ಕಿವಿಗೊಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಸಲಹಾ ಸಮಿತಿ ಸದಸ್ಯರೇ ಗಮನಹರಿಸಿ:
ಕೃಷ್ಣ ಭಾಗ್ಯಜಲ ನಿಗಮಯಡಿಯಲ್ಲಿ ರೈತರ ಪರವಾಗಿ ಹೋರಾಟ ಮಾಡಲೆಂದು ನೀರಾವರಿ ಸಲಹಾ ಸಮೀತಿಯನ್ನು ರಚಿಸಲಾಗಿದೆ. ಜು.17 ರಂದು ಆಲಮಟ್ಟಿ ಕೆಬಿಜೆಎನ್ಎಲ್ ಕಛೇರಿಯಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದ್ದು ಮುದ್ದೇಬಿಹಾಳ ತಾಲೂಕಿನ ಗರಸಂಗಿ ಗ್ರಾಮದಲ್ಲಿ ಆಗುತ್ತಿರುವ ಕಳಪೆಮಟ್ಟದ ಕಾಲುವೆ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು.
ರಾಜ್ಯಾಧ್ಯಕ್ಷರು
ಕೃಷ್ಣ-ಭೀಮಾ ಅಚ್ಚುಕಟ್ಟು ಪ್ರದೇಶ ರೈತ ಸಂಘ
ಗುಣಮಟ್ಟ ಕಾಮಗಾರಿ ನೆಡೆಸಿ:
ಸರಕಾರದಿಂದ ರೈತರಿಗಾಗಿ ನಿರ್ಮಾಣಿಸುತ್ತಿರುವ ಕಾಲುವೆಗಳನ್ನು ಗುಣಮಟ್ಟದಿಂದ ಮಾಡಿದರೆ ಮಾತ್ರ ಹಲವು ವರ್ಷಗಳವರೆಗೆ ರೈತರ ಜಮೀನಿಗೆ ನೀರು ಉಣಿಸಬಹುದಾಗಿದೆ. ಆದರೆ ಗುತ್ತಿಗೆದಾರರು ಮಾತ್ರ ತಾವುಗಳು ಹಾಕಿದ ಟೆಂಡರ್ ಬಿಲ್ ತೆಗೆಯಲು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡುತ್ತಿದ್ದು ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಗುಣಮಟ್ಟ ಕಾಮಗಾರಿಯನ್ನು ಮಾಡಬೇಕು ಎಂದು ಗರಸಂಗಿ ಗ್ರಾಮ ಪಂಚಾಯತ ಸದಸ್ಯ ಯಲ್ಲಪ್ಪ ಮೇಟಿ, ಮಾಯಪ್ಪ ಮಾದರ, ಮಾದಿಗ ದಂಡೂರ ಯುವ ಸೇನೆ ತಾಲೂಕಾಧ್ಯಕ್ಷ ಗುರಗಪ್ಪ ದೊಡಮನಿ, ರಮೇಶ ದಳಪತಿ, ರುದ್ರಪ್ಪ ಬಿಜ್ಜೂರ, ಹುಲ್ಲಪ್ಪ ನಾಗರಾಳ ಸೇರಿದಂತೆ ಅನೇಕ ರೈತರು ಆಗ್ರಹಿಸಿದ್ದಾರೆ.
Be the first to comment