ಜಿಲ್ಲಾ ಸುದ್ದಿಗಳು
ಶಿರಸಿ
ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಚ್ಯುತಿ ಬರದಂತೆ ಇಲಾಖೆ ಅಧಿಕಾರಿ ನಡೆದುಕೊಳ್ಳಬೇಕು. ಇಲ್ಲವಾದರೆ ಸರ್ಕಾರ ಕಠಿಣ ನಿಲುವು ಪ್ರದರ್ಶಿಸುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಕಾರಿ ಇಲಾಖಾ ಅಧಿಖಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಗುರುವಾರ ಶಿರಸಿ ಮಿನಿ ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಇಲಾಖೆಗಳಿಂದ ಸಹಕಾರಿ ವ್ಯವಸ್ಥೆಗೆ ಕೆಟ್ಟ ಹೆಸರು ಬರಬಾರದು. ಶಿರಸಿ ಸಹಕಾರ ಇಲಾಖೆಯ ಎಆರ್ ಕಚೇರಿಯಲ್ಲಿ ಭ್ರಷ್ಟತೆ ಹೆಚ್ಚುತ್ತಿದೆ ಎಂಬ ಮಾತು ಕೇಳಿ ಬಂದಿದೆ. ನೂತನ ಎಆರ್ ಲಿಂಗರಾಜು ಸಹಕಾರಿ ಸಂಘಗಳಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಕಾಗೇರಿ, ಸರ್ಕಾರದ ಸಂಬಳ ಸಾಕಾಗುವುದಿಲ್ಲವೇ? ಎಂದು ಕೇಳಿದರು.
ಶಿರಸಿ ತಾಲೂಕಿನಿಂದ 110 ಶಿಕ್ಷಕರು ಹೊರ ಊರುಗಳಿಗೆ ವರ್ಗವಣೆ ಆದೇಶವಾಗಿದೆ. ಈಗ ಶಿಕ್ಷಕರಿಗೆ ವರ್ಗವಾದರೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತದೆ. ಅ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ವರ್ಗವಾದ ಶಿಕ್ಷಕರಿಗೆ ಈಗಲೇ ಕಳುಹಿಸುವ ಕಾರ್ಯ ಆಗಬಾರದು ಎಂದು ಬಿಇಒ ಅವರಿಗೆ ಸೂಚಿಸಿದರು.
ಲವ್ ಜಿಹಾದ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಕಠಿಣ ಕ್ರಮ ಅನುಸರಿಸಬೇಕು. ಪಾಲಕರು ಕೂಡ ಮಕ್ಕಳಿಗೆ ತಿಳುವಳಿಕೆ ಹೇಳಬೇಕು ಎಂದರು. ಕರೊನಾ 3ನೇ ಅಲೆ ಎದುರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಶೇ.7ರಷ್ಟು ಎರಡನೇ ಹಂತದ ಲಸಿಕೆ ಪಡೆಯುವವರಿದ್ದು, ಅವರಿಗೆ ತ್ವರಿತವಾಗಿ ನೀಡಲು ಕ್ರಮವಹಿಸಲಾಗಿದೆ ಎಂದ ಕಾಗೇರಿ, ತಾಲೂಕಿನಲ್ಲಿ ಉದ್ಯೋಗ ಖಾತರಿ ಕಾಮಗಾರಿ ಹೆಚ್ಚಿಸಬೇಕು. ಈ ಬಗ್ಗೆ ಪಿಡಿಒಗಳಿಗೆ ಖಡಕ್ಕಾಗಿ ಸೂಚಿಸುವಂತೆ ತಾಪಂ ಇಒಗೆ ಸೂಚಿಸಿದರು.ಈ ವೇಳೆ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ ಸೇರಿದಂತೆ ಇನ್ನಿತರರಿದ್ದರು.
Be the first to comment