ದೇವನಹಳ್ಳಿ ಪಟ್ಟಣದ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಬೆಂಬಲಿಗರು ವಿಜೇತ ಅಭ್ಯರ್ಥಿ ಎಸ್.ರವಿ ಅವರನ್ನು ಅಭಿನಂದಿಸಿದರು

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬೆಂಗಳೂರು ಗ್ರಾಮಾಂತರ-ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಅವರು ತನ್ನ ಪ್ರತಿಸ್ಪರ್ಧಿ ಜೆಡಿಎಸ್ ನ ಎಚ್.ಎಂ.ರಮೇಶ್ ಗೌಡ ಅವರ ವಿರುದ್ಧ 722 ಮತಗಳ ಅಂತರದ ಗೆಲುವು ಪಡೆದಿದ್ದಾರೆ.ಪಟ್ಟಣದ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಮಂಗಳವಾರ ನಡೆದ ಮತ ಎಣಿಕೆ ನಡೆಯಿತು. 3912 ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 3856 ಮತಗಳು ಸಿಂಧುವಾಗಿದ್ದು, 56 ಮತಗಳು ಅಸಿಂಧುವಾಗಿದ್ದವು.ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಅವರು 2262 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್ ಅಭ್ಯರ್ಥಿ 1540 ಮತಗಳು, ಬಿಜೆಪಿ ಅಭ್ಯರ್ಥಿ ಕೇವಲ 54 ಮತಗಳನ್ನು ಪಡೆದುಕೊಂಡಿದ್ದಾರೆ.

CHETAN ಕೆಂದುಲಿ

  *ನಾಯಕರಿಗೆ ಪ್ರತಿಷ್ಟೆಯಾಗಿದ್ದ ಚುನಾವಣೆ*: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತಿಷ್ಟೆಯ ಕಣವಾಗಿದ್ದ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಸ್ವತಃ ಎಚ್.ಡಿ.ಕುಮಾರಸ್ವಾಮಿ, ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಂದು ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಸೇರಿದಂತೆ ಸ್ಥಳೀಯ ಮಾಜಿ ಶಾಸಕರಾದ ಮುನಿನರಸಿಂಹಯ್ಯ, ಕೆ.ವೆಂಕಟಸ್ವಾಮಿ, ಶಾಸಕ ವೆಂಕಟರಮಣಯ್ಯ, ಈ ಭಾಗದಲ್ಲಿ ಪ್ರಚಾರ ನಡೆಸಿದ್ದರು. ಜೆಡಿಎಸ್ ಅಭ್ಯರ್ಥಿ ಪರವಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಕೂಡಾ ಪ್ರಚಾರ ನಡೆಸಿದ್ದರು. *5 ಮಂದಿ ಶಾಸಕರಿದ್ದರೂ ಹಿನ್ನಡೆ*: ಎರಡೂ ಜಿಲ್ಲೆಗಳಲ್ಲಿ 5 ಮಂದಿ ಜೆಡಿಎಸ್ ಶಾಸಕರಿದ್ದರೂ ಕೂಡಾ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳು ಲಭಿಸಿವೆ. ಈ ಮೂಲಕ ಜೆಡಿಎಸ್ ಶಾಸಕರ ಪ್ರಭಾವ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಬೀರಿಲ್ಲ ಎನ್ನುವ ಮಾತುಗಳು ಕೇಳಿಬಂದವು.*ವಿಳಂಬವಾದ ಮತ ಎಣಿಕೆ ಕಾರ್ಯ*: ಬೆಳಿಗ್ಗೆ 8 ಗಂಟೆಗೆ ಆರಂಭವಾಗಬೇಕಾಗಿದ್ದ ಮತ ಎಣಿಕೆ ಕಾರ್ಯವು 11 ಗಂಟೆಗೆ ಆರಂಭವಾಯಿತು. ವಿಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಸದಸ್ಯರೊಬ್ಬರು ಚಲಾಯಿಸಿದ್ದ ಮತವನ್ನು ಬಹಿರಂಗವಾಗಿ ತೋರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚುನಾವಣೆ ಆಯೋಗದಿಂದ ನಿರ್ದೇಶನ ಕೋರಿದ್ದ ಜಿಲ್ಲಾಧಿಕಾರಿ, ಒಬ್ಬ ಸದಸ್ಯನ ಮತವನ್ನು ಅಸಿಂಧುಗೊಳಿಸುವ ಪ್ರಕ್ರಿಯೆ ಮಾಡಬೇಕಾಗಿದ್ದರಿಂದ ಮತ ಎಣಿಕೆ ಕಾರ್ಯ ವಿಳಂಬವಾಯಿತು.

*ಅಭ್ಯರ್ಥಿಗಳಲ್ಲಿ ಕುತೂಹಲ*: ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದು, ಯಾರೇ ಗೆದ್ದರೂ ಅಲ್ಪಮತಗಳಿಂದ ಗೆಲವು ಸಾಧಿಸಲಿದ್ದಾರೆ ಎನ್ನುವ ಸಮೀಕ್ಷೆ ವರದಿಗಳು ಹೊರಬಿದ್ದಿದ್ದರಿಂದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಲ್ಲಿ ಕುತೂಹಲ ಶುರುವಾಗಿತ್ತು. ಪದೇ ಪದೇ ಎಣಿಕೆ ಮಾಡುತ್ತಿದ್ದ ಕೊಠಡಿಗಳ ಒಳಗೆ ಹೋಗಿ ಎಷ್ಟೇಷ್ಟು ಮತ ಬಂದಿವೆ ಎನ್ನುವ ಬಗ್ಗೆ ಕಾತರಿಪಡಿಸಿಕೊಳ್ಳುತ್ತಿದ್ದರು.*ಸುಳಿಯದ ಬಿಜೆಪಿ ಅಭ್ಯರ್ಥಿ*: ಈ ಚುನಾವಣೆಯಲ್ಲಿ ನಮ್ಮದೇ ಸರ್ಕಾರವಿದೆ. ನಮ್ಮ ಪಕ್ಷದ ಬೆಂಬಲಿಗರೂ ಕೂಡಾ ಎರಡೂ ಜಿಲ್ಲೆಗಳಲ್ಲಿ 1800 ಕ್ಕೂ ಹೆಚ್ಚು ಮಂದಿ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ, ಹಾಗೂ ಅವರ ಬೆಂಬಲಿಗರು ಮತ ಎಣಿಕೆ ಕೇಂದ್ರದ ಕಡೆಗೆ ಸುಳಿದಿರಲಿಲ್ಲ.  ಕಾಂಗ್ರೆಸ್ ಸದಸ್ಯ ಎಸ್.ರವಿ ಮಾತನಾಡಿ, ಎರಡೂ ಜಿಲ್ಲೆಗಳಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮತ ಹಾಕಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ ಇರುವ ಕಾರಣ, ಸಾಕಷ್ಟು ಮಂದಿ ಬೇರೆ ಪಕ್ಷಗಳ ಸದಸ್ಯರೂ ಕೂಡಾ ನಮ್ಮ ಪಕ್ಷದ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ನಾವು ಇಷ್ಟು ಮತಗಳು ಬರುತ್ತವೆ ಎನ್ನುವ ನಿರೀಕ್ಷೆಯಿಟ್ಟಿರಲಿಲ್ಲ. ಜನರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಇಟ್ಟಿರುವ ವಿಶ್ವಾಸವಾಗಿದೆ. ಇದು ನನ್ನ ಗೆಲುವಲ್ಲ. ಇದು ನಮ್ಮ ನಾಯಕರು, ನಮ್ಮ ಪಕ್ಷದ ಗೆಲುವಾಗಿದೆ ಎಂದರು.

  ಪರಾಜಿತ ಅಭ್ಯರ್ಥಿ ಎಚ್.ಎಂ.ರಮೇಶ್ ಗೌಡ ಮಾತನಾಡಿ, ಜನರು ಆಶೀರ್ವಾದ ಮಾಡುತ್ತಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ, ಜನ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ನನಗೆ ಬಂದಿರುವ ಮತಗಳು ಕುಮಾರಸ್ವಾಮಿ ಅವರನ್ನು ನೋಡಿ ಕೊಟ್ಟಿದ್ದಾರೆ. ನಮ್ಮ ಶಾಸಕರಿದ್ದರೂ ನಾವು ಗೆಲ್ಲಲು ಸಾಧ್ಯವಾಗಿಲ್ಲ. ಕನಕಪುರದಲ್ಲಿ ಅವರು ಹೆಚ್ಚು ಮತಗಳಿಸಿದ್ದಾರೆ. ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವೂ ಕೂಡಾ ಅದೇ ರೀತಿ ಮಾಡಿದ್ದೇವೆ. ಇಬ್ಬರು ಸ್ಪರ್ಧೆಯಲ್ಲಿದ್ದಾಗ ಯಾರಾದರೂ ಒಬ್ಬರು ಗೆಲ್ಲಬೇಕು ಅಷ್ಟೇ. ನಾವೂ ಕೂಡಾ ರಣತಂತ್ರ ಮಾಡಿದ್ದೇವೆ. ಅವರೂ ಮಾಡಿದ್ದಾರೆ ಮತದಾರರ ತೀರ್ಪಿಗೆ ತಲೆಬಾಗುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಎಂಎಲ್ಎ ವೆಂಕಟಸ್ವಾಮಿ,ಮುನಿನರಸಿಂಹಯ್ಯ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್, ಕಾರ್ಯದರ್ಶಿ ಎಸ್.ಪಿ ಮುನಿರಾಜ್, ಚಿನ್ನಪ್ಪ, ಜಿಲ್ಲಾ ಎಸ್ಸಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಯುವ ಜಿಲ್ಲಾಧ್ಯಕ್ಷ ನಾಗೇಶ್, ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು

Be the first to comment

Leave a Reply

Your email address will not be published.


*