ರಾಜ್ಯ ಸುದ್ದಿ
ಪ್ರತಿ ಜನರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರು ಸರಕಾರದಿಂದ ಸಿಗುವ ಸೌಲಭ್ಯವನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕೊಯಿರ ಗ್ರಾಪಂ ಅಧ್ಯಕ್ಷೆ ರಮ್ಯ.ವಿ.ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕೊಯಿರ ಕಾಲೋನಿಯಲ್ಲಿ ಗ್ರಾಪಂ ವತಿಯಿಂದ ಉಚಿತ ಡಸ್ಟ್‌ಬಿನ್‌ಗಳನ್ನು ವಿತರಿಸಿ ಮಾತನಾಡಿದರು. ನಮ್ಮ ಗ್ರಾಮದ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ, ಡಸ್ಟ್‌ಬಿನ್‌ಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಗ್ರಾಪಂನಿಂದ ಬರುವ ಕಸವಿಲೇವಾರಿ ವಾಹನಕ್ಕೆ ಸುರಿಯಬೇಕು. ಇದು ದೈನಂದಿನ ಕೆಲಸಗಳಲ್ಲಿ ಒಂದಾಗಿಸಿಕೊಳ್ಳಬೇಕು. ಇದರ ಜೊತೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಗ್ರಾಪಂ ಸದಸ್ಯೆ ವೀಣಾ.ಎಚ್.ಎಂ.ರವಿಕುಮಾರ್ ಮಾತನಾಡಿ, ಪಂಚಾಯಿತಿಯಿಂದ ನೀಡುತ್ತಿರುವ ಡಸ್ಟ್‌ಬಿನ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಒಣಕಸವನ್ನು ಡಸ್ಟ್‌ಬಿನ್‌ಗಳಲ್ಲಿ ಸಂಗ್ರಹಿಸಬೇಕು. ಹಸಿ ಕಸವನ್ನು ಗೊಬ್ಬರ ಮಾಡಿ ಕೃಷಿಗೆ ಉಪಯೋಗಿಸಬೇಕು. ಮನೆಗಳ ಸುತ್ತಮುತ್ತಲು ಸ್ವಚ್ಛವಾಗಿಟ್ಟುಕೊಳ್ಳಬೇಕು. ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಗಮನವಹಿಸಬೇಕು. ನೀರು ನಿಂತರೆ ಅನಾರೋಗ್ಯಕ್ಕೆ ಆಹ್ವಾನ ನೀಡುವಂತೆ ಆಗುತ್ತದೆ. ಇದನ್ನು ಪ್ರತಿಯೊಬ್ಬರು ನೋಡಿಕೊಳ್ಳಬೇಕು. ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಬ್ಬರು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಮುಖಂಡ ಕೊಯಿರ ಶ್ರೀನಿವಾಸ್ ಮಾತನಾಡಿ, ಕೋವಿಡ್ ಕಾಲದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಹೊಂದಲು ವೈಯಕ್ತಿ ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸಬೇಕು. ಮಹಿಳೆಯರು ತಮ್ಮ ಮನೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಮನೆ ಸ್ವಚ್ಚವಾಗಿದ್ದರೆ, ಗ್ರಾಮ ಸ್ವಚ್ಛವಾಗಿರುತ್ತದೆ. ಗ್ರಾಮ ಸ್ವಚ್ಛವಾಗಿದ್ದರೆ, ಹೋಬಳಿ ಸ್ವಚ್ಛವಾಗಿರುತ್ತದೆ. ಹೋಬಳಿ ಸ್ವಚ್ಛವಾಗಿದ್ದರೆ, ಇಡೀ ತಾಲೂಕು, ಜಿಲ್ಲೆ, ರಾಜ್ಯ ಸ್ವಚ್ಛವಾಗಿರುತ್ತದೆ. ಇದನ್ನು ಪ್ರತಿಯೊಬ್ಬರು ಈಗಿನಿಂದಲೇ ಸ್ವ-ಇಚ್ಚೆಯಿಂದ ಸ್ವಚ್ಛತೆಗೆ ಮುಂದಾಗಬೇಕು ಎಂದರು. ಈ ವೇಳೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್, ಮುಖಂಡರಾದ ಶ್ರೀನಿವಾಸ್, ಪಿಡಿಒ ಆದರ್ಶ್‌ಕುಮಾರ್, ಕಾರ್ಯದರ್ಶಿ ಆದೆಪ್ಪ, ಸಿಬ್ಬಂದಿ ಮುನಿರಾಜು, ಗ್ರಾಮಸ್ಥರು, ಇದ್ದರು.
Be the first to comment