ರಾಜ್ಯ ಸುದ್ದಿ
ಶಿರಸಿ: ಶಿರಸಿ ನನ್ನ ಹುಟ್ಟೂರು. ಇಲ್ಲಿಯ ಜನರು ಹಾಗು ಪರಿಸರದೊಂದಿಗೆ ಪ್ರೀತಿಯ ಭಾವನೆ ನನಗಿದೆ. ಬಹುತೇಕರು ಪರಿಚಿತರಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಸುಷ್ಮಾ ರಾಜಗೋಪಾಲ ಹೇಳಿದರು.
ಶನಿವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, 2010ರಲ್ಲಿಯೇ ಮಹಿಳಾ ರಾಜ್ಯ ಉಪಾಧ್ಯಕ್ಷೆಯಾಗಿ ಕೆಲಸ ಮಾಡಿರುವ ಅನುಭವ ನನಗಿದೆ. ಕಾಂಗ್ರೆಸ್ ಪಕ್ಷ ಸಧೃಡಗೊಳಿಸುವ ಸಲುವಾಗಿ ಹಿಂದಿನಿಂದಲೂ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದೇನೆ ಎಂದರು. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ನಾನು ಅವಕಾಶ ಕೇಳಿದ್ದೆ. ಆದರೆ, ನನ್ನನ್ನು ಬೊಮ್ಮನಳ್ಳಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ಬೊಮ್ಮನಳ್ಳಿ ನನ್ನ ವ್ಯಾಪ್ತಿಯ ಕ್ಷೇತ್ರವಲ್ಲದ ಕಾರಣ ಸೋಲುಂಟಾಗಿದೆ. ಆದರೆ, ಶಿರಸಿ ಕ್ಷೇತ್ರದಲ್ಲಿ ನನ್ನ ಸಹೋದರ ದಿ. ದೀಪಕ ಹೊನ್ನಾವರ ಅವರ ಜನಪರ ಕಾರ್ಯಗಳನ್ನು ಎಲ್ಲರೂ ನೆನಪಿಟ್ಟಿದ್ದಾರೆ. ಅವರು ಚುನಾವಣೆಗೆ ನಿಂತ ವೇಳೆ ಕ್ಷೇತ್ರದೆಲ್ಲೆಡೆ ಪ್ರಚಾರ ಕಾರ್ಯ ನಡೆಸಿದ್ದೆ ಎಂದರು.
ಸಂಕಷ್ಟದಲ್ಲಿದ್ದವರಿಗೆ ಧಾನ್ಯದ ಕಿಟ್: ಕೊರೊನಾದಿಂದಾಗಿ ಹಲವಾರು ಜನರು ಸಂಕಷ್ಟದಲ್ಲಿದ್ದಾರೆ. ನಿತ್ಯ ದುಡಿಮೆಯಿಂದ ಜೀವನ ಸಾಗಿಸುವವರಿಗೆ ಆದಾಯವಿಲ್ಲದೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳು, ಆಟೋ-ಟೆಂಪೋ ಚಾಲಕರು ಹೀಗಿ ವಿವಿಧ ವೃತ್ತಿಯ ಜನರಿಗೆ ಆದಾಯವಿಲ್ಲದೆ ಇದ್ದಾರೆ. ಅಂತಹ ಬಡ ಕುಟುಂಬಗಳಿಗೆ ಸೋಮವಾರದಿಂದ ಆಹಾರ ಕಿಟ್ ವಿತರಣೆ ಮಾಡಲಿದ್ದೇವೆ. ಒಟ್ಟೂ ಒಟ್ಟು 5,000 ಕಿಟ್ ಗಳನ್ನು ವಿತರಣೆ ಮಾಡಲಿದ್ದೇವೆ ಎಂದರು. ಸುದ್ಧಿಗೋಷ್ಟಿಯಲ್ಲಿ ನಗರ ಸಭಾ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಪ್ರಮುಖರಾದ ಸೂರ್ಯಪ್ರಕಾಶ ಹೊನ್ನಾವರ, ಸತೀಶ ನಾಯ್ಕ, ಸುಮಾ ಉಗ್ರಾಣಕರ್ ಇತರರಿದ್ದರು.
Be the first to comment