8 ತಾಸುಗಳ ಸತತ ಕಾರ್ಯಾಚರಣೆ : ನಿದ್ದೆಗೆಡಿಸಿದ್ದ ಮೊಸಳೆ ಕೊನೆಗೂ ಸೆರೆ

ವರದಿ: ಕಾಶೀನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

ನಾಲತವಾಡ:

CHETAN KENDULI

ಕಳೆದ ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಬೃಹತ್ ಮೊಸಳೆಯೊಂದನ್ನು ಶನಿವಾರ ಸತತ ಎಂಟು ತಾಸು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ,ಮೊಸಳೆ ಸೆರೆ ಹಿಡಿಯುವ ಪರಿಣತರ ತಂಡ ಹಾಗೂ ಸ್ಥಳೀಯರ ನೆರವಿನಿಂದ ಕೊನೆಗೂ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.



 ತಾಲೂಕಿನ ನಾಲತವಾಡ ರೈತರ ನೆಮ್ಮದಿ ಹಾಳು ಮಾಡಿದ್ದ ರಾಯಪ್ಪ ವಾಲಿ ಎಂಬುವರ ಜಮೀನಿನಲ್ಲಿ ಇದ್ದ ಬಾವಿಯಲ್ಲಿ ಬೃಹತ್ ಮೊಸಳೆ ಅಡಗಿಕೊಂಡಿತ್ತು. ಜಮೀನಿನ ಮಾಲೀಕ ಹಾಗೂ ಪಕ್ಕದ ಜಮೀನವರು ಕೆಲಸಕ್ಕೆ ಹೋಗಬೇಕಿದ್ದರೆ ಭಯದಲ್ಲೇ ಹೋಗಬೇಕಾಗಿತ್ತು.

 ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಇಕ್ಕಟ್ಟಾದ ಜಾಗೆಯಲ್ಲಿದ್ದ ಬಾವಿಯಲ್ಲಿನ ನೀರನ್ನು ಖಾಲಿ ಮಾಡಿಸಿ ಬಳಿಕ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದರು. ಮೊಸಳೆ ಸೆರೆ ಹಿಡಿಯುವಲ್ಲಿ ಪರಿಣತಿ ಹೊಂದಿರುವ ನಿಡಗುಂದಿ ಪಟ್ಟಣದ ನಾಗೇಶ ವಡ್ಡರ ಹಾಗೂ ತಂಡ ಅರಣ್ಯ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿ ಹಾಗೂ ಸ್ಥಳೀಯ ರೈತರ ನೆರವಿನಿಂದ ಬಾವಿಯಲ್ಲಿರುವ ನೀರು ಖಾಲಿ ಮಾಡಿ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

 ಈ ಸಂದರ್ಭದಲ್ಲಿ ಸೆರೆ ಹಿಡಿದ ಮೊಸಳೆಯನ್ನು ಕೃಷ್ಣಾ ನದಿ ಹಿನ್ನೀರಿನಲ್ಲಿ ಬಿಡಲಾಯಿತು. ಅರಣ್ಯ ಇಲಾಖೆಯ ಅಧಿಕಾರಿ ರಾಜಿವ ಬಿರಾದಾರ ಮಾರ್ಗದರ್ಶನದಲ್ಲಿ ಎಂ.ಎಚ್.ತೇಲಿ, ವಿಶ್ವೇಶ್ವರಯ್ಯ ಹಿರೇಮಠ, ರಮೇಶ ಮೆಟಗುಡ್ಡ, ನಾಲತವಾಡ ಹೊರಠಾಣೆಯ ಸಿಬ್ಬಂದಿ ಜಿ.ಟಿ.ಗೆಣ್ಣೂರ,ರವಿ ವಿಜಾಪೂರ ಹಾಗೂ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*