ರಾಜ್ಯ ಸುದ್ದಿ
ಯಲ್ಲಾಪುರ: ತಾಲೂಕಿನ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶವಾದ ದೇಹಳ್ಳಿ ಮತ್ತು ಆನಗೋಡ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ವ್ಯಾಪಕವಾದ ಅರಣ್ಯನಾಶ ಮತ್ತು ಖನಿಜಾಂಶಯುಕ್ತ ಮಣ್ಣು ಕಳ್ಳಸಾಗಣಿಯಿಂದ ಸುಮಾರು 1 ಕೋಟಿ ರೂಪಾಯಿಯಷ್ಟು ಅರಣ್ಯ ಪರಿಸರ ಮೌಲ್ಯ ನಾಶವಾಗಿದ್ದು, ಅರಣ್ಯ ಕಾನೂನನ್ನು ಅರಣ್ಯಾಧಿಕಾರಿಗಳೇ ಉಲ್ಲಂಘಿಸಿ ಪರಿಸರ ನಾಶಕ್ಕೆ ಕಾರಣವಾಗಿದ್ದು ಖಂಡನಾರ್ಹ. ಅಂತಹ ಅರಣ್ಯಾಧಿಕಾರಿ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಅವರು ಸೋಮವಾರ ಪರಿಸರ ನಾಶಕ್ಕೆ ಕಾರಣವಾದ ಅನಗೋಡ, ಬೀಸಗೋಡ, ಕುಂಬ್ರಾಳ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಅರಣ್ಯ ಮಾರಣ ಹೋಮವಾಗಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಬಡವರು, ರೈತರು ಜೀವನಕ್ಕಾಗಿ, ವಾಸ್ತವ್ಯಕ್ಕಾಗಿ ಅರಣ್ಯ ಭೂಮಿ ಸಾಗುವಳಿ ಮಾಡುವರ ಮೇಲೆ ವಿನಾಕಾರಣ ದೌರ್ಜನ್ಯ, ಕಿರುಕುಳ ಮಾಡಿ ಹಿಂಸಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂತಹ ಕಾನೂನು ಬಾಹಿರ ಕೃತ್ಯಕ್ಕೆ ಪ್ರೇರಕವಾಗಿರುವದು ವಿಷಾದಕರ. ನಿರಂತರ ಹಲವು ದಿನಗಳಿಂದ ಅಪಕೃತ್ಯ ಜರಗುತ್ತಿದ್ದರೂ ಅರಣ್ಯ ಇಲಾಖೆ ಮೌನವಾಗಿರುವದು ಖೇದಕರ ಎಂದು ಅವರು ಹೇಳಿದರು.
ದೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಂಬ್ರಾಳದಲ್ಲಿ ಹತ್ತರಿಂದ 50 ವರ್ಷದ ಸಿಸಂ, ನಂದಿ, ಮತ್ತಿ, ಸಾಗುವನಿ ಮುಂತಾದ ಬೆಲೆಬಾಳುವ ಮರ ಕಡಿದು, ಮಣ್ಣಿನಲ್ಲಿ ಹುಗಿದು ಸಾಕ್ಷ್ಯ ನಾಶಮಾಡಿ ಸುಮಾರು 250 ರಿಂದ 300 ಕ್ಕಿಂತ ಹೆಚ್ಚಿನ ಗಿಡ-ಮರ ನಾಶಕ್ಕೆ ಕಾರಣವಾಗಿರುವದು ಅರಣ್ಯ ಅಧಿಕಾರಿಗಳ ಕರ್ತವ್ಯ ಚ್ಯುತಿ ವೆಸಗಿದ್ದಾರೆ. ಸದ್ರಿ ಪ್ರದೇಶವು ಕಾಳಿನದಿ ಹಿನ್ನೀರು ಪ್ರದೇಶ ಅಂಚಿನಲ್ಲಿರುವದರಿಂದ ಭೂ ಕುಸಿತ, ಔಷಧಯುಕ್ತ ಸೂಕ್ಷ್ಮ ಗಿಡಗಳು ವನ್ಯಜೀವಿಗಳಿಗೆ ಆತಂಕ, ಸಂಪ್ರದಾಯುಕ್ತ ಜೇನು ಅಭಿವೃದ್ಧಿಗೆ ಮಾರಕ, ವಿವಿಧ ವಿಧದಲ್ಲಿ ಜೀವ ವೈವಿಧ್ಯತೆ ನಾಶ ಮುಂತಾದ ಪರಿಸರ ಹಾನಿಕರ ಕೃತ್ಯಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯತನ ಕಾರಣವೆಂದು ರವೀಂದ್ರ ನಾಯ್ಕ ವಿವರಿಸಿದರು.
ಖನಿಜಯುಕ್ತ ಮಣ್ಣು ಕಳ್ಳಸಾಗಾಣಿ: ಅನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಬೀಸಗೋಡ ಗ್ರಾಮದ ಸುತ್ತಮುತ್ತ ದಿನದಿಂದ ದಿನಕ್ಕೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ವ್ಯಾಪಕವಾಗಿ ಬೆಲೆಬಾಳುವ ಖನಿಜಯುಕ್ತ ಮಣ್ಣು ಕಳ್ಳತನವಾದರೂ ಅರಣ್ಯ ಇಲಾಖೆ ನಿದ್ರೆಯಲ್ಲಿರುವದು ಖಂಡನಾರ್ಹ. ಖನಿಜಯುಕ್ತ ಮಣ್ಣು ಕಳ್ಳಸಾಗಣಿ ಕುರಿತು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಕಾನೂನು ಬಾಹಿರ ಕೃತ್ಯಕ್ಕೆ ವ್ಯಾಪಕವಾದ ಅರಣ್ಯ ಅಧಿಕಾರಿಯ ಮೇಲೆ ತಕ್ಷಣ ಕಾನೂನು ಕ್ರಮ ಅವಶ್ಯ ಎಂದು ರವೀಂದ್ರ ನಾಯ್ಕ ಅಗ್ರಹಿಸಿದ್ದರು.
Be the first to comment