ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲೂಕು ಕೋವಿಡ್-19ನಿಂದ ಸುರಕ್ಷಿತ ವಲಯದಲ್ಲಿದೆ. ಇದಕ್ಕೆ ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪ್ರಾಮಾಣಿಕ ಸೇವೆ ಕಾರಣವಾಗಿದೆ. ಪೊಲೀಸರು, ಪತ್ರಕರ್ತರು, ಗ್ರಾಪಂ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡಿದ್ದಾರೆ. ಆದರೂ ನಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ಸತೀಶ ತಿವಾರಿ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಹತ್ತಿರ ವಿದ್ಯಾನಗರದಲ್ಲಿರುವ ಸೇವಾ ಸದನದಲ್ಲಿ ಸೇವಾ ಸದನ ಸಮಾಜಸೇವಾ ಕೇಂದ್ರ ಹಾಗು ಪ್ರಗತಿ ಸೋಶಿಯಲ್ ವೆಲ್‌ಫೇರ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿಂದಿನ 9 ತಿಂಗಳು ನಮ್ಮೆಲ್ಲರಿಗೂ ಕರಾಳ ದಿನಗಳಾಗಿದ್ದವು. ಈ ತಾಲೂಕಿನಲ್ಲಿ ಇದುವರೆಗೆ 43000 ಜನರಿಗೆ ಕೊವಿಡ್-19 ತಪಾಸಣೆ ನಡೆಸಲಾಗಿದೆ. ಇದರಲ್ಲಿ 2566 ಪೊಜಿಟಿವ್ ಬಂದಿವೆ. ಆದರೆ ಸಾವಿನ ಪ್ರಮಾಣ ತುಂಬಾನೆ ಕಡಿಮೆ ಇದೆ. ನಮ್ಮ ಜನರಿಗೆ ಎಸ್‌ಓಪಿ ನಿಯಮ ಪಾಲಿಸುವುದರ ಮಹತ್ವ ಈಗೀಗ ಗೊತ್ತಾಗತೊಡಗಿದೆ. ಕೆಲವೇ ದಿನಗಳಲ್ಲಿ ಕೊರೊನಾಕ್ಕೆ ಲಸಿಕೆ ಸಿಗಲಿದೆ. ಆದರೂ ಮುನ್ನೆಚ್ಚರಿಕೆ ಕ್ರಮ ಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೇಯದು. ಸೇವಾ ಸದನ ಸೇವಾಕರ್ತರು ಕೊರೊನಾ ವಾರಿಯರ್‌ಗಳನ್ನು ಗುರ್ತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಳಿಕೋಟೆಯ ಸೇಕ್ರೆಡ್ ಹಾರ್ಟ ಶಾಲೆಯ ಸಂಚಾಲಕ ಫಾದರ್ ಸ್ಟೀವನ್ ವೇಗಸ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಅದು ದೇವರಿಗೆ ಪ್ರಿಯವಾಗುತ್ತದೆ. ಮಾನವೀಯ ಕಾರ್ಯಕ್ಕೆ ಎಂದಿಗೂ ಸಾರ್ಥಕತೆ ದೊರಕುತ್ತದೆ. ಮನುಷ್ಯರಲ್ಲಿ ದೇವರನ್ನು ಕಾಣಲು ನಾವೆಲ್ಲ ಪ್ರಯತ್ನಿಸೋಣ ಎಂದರು.
ಅತಿಥಿಗಳಾಗಿದ್ದ ನಗರ ಕೋವಿಡ್-19 ಮೇಲ್ವಿಚಾರಕ ಎಂ.ಎಸ್.ಗೌಡರ, ಹಿರಿಯ ಪತ್ರಕರ್ತರಾದ ಡಿ.ಬಿ.ವಡವಡಗಿ, ಎಂ.ಎಸ್.ಗಡೇದ ಮಾತನಾಡಿ, ಕೊರೊನಾ ಏರುಗತಿಯಲ್ಲಿದ್ದಾಗ ಹಗಲು ರಾತ್ರಿ ಕೊರೊನಾ ಸೇನಾನಿಗಳಂತೆ ಹಲವರು ಕೆಲಸ ಮಾಡಿದ್ದಾರೆ. ಆರೋಗ್ಯ ಸಿಬ್ಬಂದಿಯಂತೂ ದಿನದ 24 ಗಂಟೆ ಅವಿಶ್ರಾಂತವಾಗಿ ಕೆಲಸ ಮಾಡುವ ಪರಿಸ್ಥಿತಿ ಇತ್ತು. ಕೊರೊನಾ ಮನುಕುಲಕ್ಕೆ ಹಲವು ಪಾಠ ಕಲಿಸಿದೆ. ಒಡೆದ ಮನಸ್ಸು, ಬಿರುಕುಬಿಟ್ಟ ಕುಟುಂಬ, ಸಂಬಂಧಗಳನ್ನು ಒಂದುಗೂಡಿಸಿದೆ. ಯಾವುದೇ ರೋಗದಿಂದ ನಾವು ರಕ್ಷಿಸಿಕೊಳ್ಳಬೇಕಾದರೆ ಮೊದಲು ನಮ್ಮ ಮಾನಸಿಕ ಶಕ್ತಿ ಗಟ್ಟಿಯಾಗಿರಬೇಕು. ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸುವುದು ಜವಾಬ್ಧಾರಿ ಹೆಚ್ಚಿಸಿದಂತಾಗಿದೆ. ಸೇವಾ ಸದನದವರ ಈ ಕಾರ್ಯ ಇತರೆ ಸಮಾಜಸೇವಾ ಸಂಘಟನೆಗಳಿಗೆ ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ಸದನದ ನಿರ್ದೇಶಕಿ ಸಿಸ್ಟರ್ ಬೀನಾ ಕೊರೊನಾ ವಾರಿಯರ್‌ಗಳ ಸನ್ಮಾನದ ಔಚಿತ್ಯದ ಕುರಿತು ಮಾತನಾಡಿ ನಿಸ್ಪೃಹ ಸೇವೆ ನಮ್ಮನ್ನು ದೇವರಿಗೆ ಪ್ರೀತಿಪೂರ್ವಕರನ್ನಾಗಿ ಮಾಡುತ್ತದೆ ಎಂದರು.
ಆಶಾ ಕಾರ್ಯಕರ್ತೆಯರಾದ ಬಸರಕೋಡದ ಸವಿತಾ ಕುಂಬಾರ, ಬೇಬಿ ಕೊಟಗಿ, ಬಸಲಿಂಗಮ್ಮ ವಸ್ತçದ, ರೂಢಗಿಯ ಅಶ್ವಿನಿ ಚವ್ಹಾಣ, ಮುತ್ತಕ್ಕ ದೊಡಮನಿ, ಅನುಸೂಯಾ ಚಲವಾದಿ, ಗುಂಡಕರ್ಜಗಿಯ ನಂದಾ ಹೆಗಡಿಹಾಳ, ಗುಡದಿನ್ನಿಯ ನಾಗಮ್ಮ ಕುಂಬಾರ, ಅಂಗನವಾಡಿ ಕಾರ್ಯಕರ್ತೆಯರಾದ ಆಲಕೊಪ್ಪರದ ಗುರುಬಾಯಿ ಪಾಟೀಲ, ಶಕುಂತಲ ಬೀಳಗಿ, ಪತ್ರಕರ್ತರಾದ ಗುರುನಾಥ ಕತ್ತಿ, ಸಿದ್ದು ಚಲವಾದಿ, ಶಂಕರ ಹೆಬ್ಬಾಳ, ಲಾಡ್ಲೇಮಶ್ಯಾಕ ನದಾಫ, ಚೇತನ ಶಿವಶಿಂಪಿ, ಸಾಗರ ಉಕ್ಕಲಿ, ಜಿಲಾನಿ ಮಕಾನದಾರ, ಕೃಷ್ಣಾ ಕುಂಬಾರ ಹಾಗೂ ರೂಢಗಿ ಗ್ರಾಪಂ ಸಿಬ್ಬಂದಿಗಳಿಗೆ ಹಾಗೂ ವೇದಿಕೆಯಲ್ಲಿದ್ದ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕ್ರಿಸ್‌ಮಸ್, ಹೊಸವರ್ಷದ ಹಿನ್ನೆಲೆ ಕೇಕ್ ಕತ್ತರಿಸಲಾಯಿತು. ಫಾದರ್ ಸ್ಟಿವನ್ ವೇಗಸ್ ಕ್ರಿಸ್‌ಮಸ್ ಸಂದೇಶ ನೀಡಿದರು. ಸಿಸ್ಟರ್ ಬೀನಾ ಸ್ವಾಗತಿಸಿದರು. ಜೆಸಿ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಸ್ಟೆಲ್ಲಾ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಸ್ಟರ್ ಗ್ಲೋರಿಯಾ, ಸಿಸ್ಟರ್ ವೀಣಾ ನಿರೂಪಿಸಿದರು. ಸಿಸ್ಟರ್ ಲೀನಾ ವಂದಿಸಿದರು.
Be the first to comment