ಅದ್ದೂರಿಯಾಗಿ ನಡೆದ ಹಾಲುಮತ ಸಮಾಜದ ಇಷ್ಟಾರ್ಥ ದೈವ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ…!!! ನಿವೃತ್ತ ಎಫ್.ಡಿ.ಸಿ. ಕರಿಯಪ್ಪ ಮೇಟಿ ಮನೆತನದಿಂದ ಭಕ್ತಿಸುಧೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಭಕ್ತರ ಬೇಡಿಕೆಯನ್ನು ಈಡೇರಿಸಿದ ನಂತರ ಹಾಲುಮತ ಸಮಾಜದಿಂದ ಭಕ್ತಿಪೂರ್ವಕವಾಗಿ ನಡೆಯುವ ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವವು ಮಂಗಳವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿತು.

ತಾಲೂಕಿನ ಹಡಗಲಿ ಗ್ರಾಮದ ಕರಿಯಪ್ಪ ಮೇಟಿ ಅವರ ಮನೆತನದ ಶ್ರೀ ಬೀರಲಿಂಗೇಶ್ವರ ದೇವರ ಮೂರ್ತಿಯನ್ನು ಹಾಲುಮತದ ಸಮಾಜದವರು ಅವರ ಇಷ್ಟಾರ್ಥಗಳು ಈಡೇರಿದ ನಂತರ ಪಲ್ಲಕ್ಕಿ ಉತ್ಸವವನ್ನು ಮಾಡುವುದು ಹಿಂದಿನಿಂದಲೂ ಬಂದಂತಹ ಕಾಯಕವಾಗಿದೆ. ಅದರಂತೆ ಮುದ್ದೇಬಿಹಾಳ ಪಟ್ಟಣದ ಹಳೆ ಸರಕಾರಿ ದವಾಖಾನೆಯ ಹತ್ತಿರದ ಕರಿಯಪ್ಪ ಲಗಮಣ್ಣ ಮೇಟಿ ಅವರು ತಮ್ಮ ಮನೆತನದ ಇಷ್ಟಾರ್ಥವನ್ನು ಈಡೇರಿದ ಪ್ರಯುಕ್ತ ಪಟ್ಟಣದಲ್ಲಿ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಿಂದ ನೆರವೇರಿಸಿದರು.



ದೇವರ ಗುಂಡು ಬಾರಿಸಿಕೊಂಡ ಭಕ್ತರು:

ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಕಬ್ಬಿನದ ಗುಂಡುಗಳನ್ನು ತಮ್ಮ ಬೆನ್ನಿಗೆ ಬಡಿಯುವ ಮೂಲಕ ಭಕ್ತಿಯನ್ನು ದೇವರಿಗೆ ಅರ್ಪಿಸುತ್ತಾರೆ. ಮಂಗಳವಾರ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಪುರುಷರು ಮಾತ್ರವಲ್ಲದೇ ಮಹಿಳೆಯರೂ ತಮ್ಮ ಬೆನ್ನಿಗೆ ದೇವರ ಗುಂಡುಗಳನ್ನು ಬಡಿಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು.



ಚಿಣ್ಣರಿಂದಲೂ ಡೊಳ್ಳಿನ ವಾದ:

ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿದ್ದ ಸಮಾಜದ ಚಿಣ್ಣರು ಡೊಳ್ಳು ವಾದ್ಯ ಬಾರಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದು ಸಾರ್ವಜನಿಕರ ಗಮನ ಸೇಳೆಯಿತು. ಅಲ್ಲದೇ ದೊಡ್ಡವರ ರೀತಿಯಲ್ಲಿಯೇ ಡೊಳ್ಳು ವಾಧ್ಯ ಬಾರಿಸಿದ್ದು ಭಕ್ತಿಯ ಸುಧೆ ಮೊಳಗಿತು.



ಪಲ್ಲಕ್ಕಿ ಉತ್ಸವ:

ಮುದ್ದೇಬಿಹಾಳ ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಲಕ್ಷ್ಮೀ ಭಾವಿಯಲ್ಲಿ ಮೊದಲಿಗೆ ದೇವರ ಗಂಗಸ್ಥಳ ಮಾಡಿಸಲಾಯಿತು. ನಂತರ ದುರ್ಗಾದೇವಿ ದೇವಸ್ಥಾನ, ಭಗತಸಿಂಗ್ ವೃತ್ತದ ಮೂಲಕ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವವನ್ನು ಮಾಡಲಾಯಿತು.

ಪಲ್ಲಕ್ಕಿ ಉತ್ಸವದಲ್ಲಿ ತಾಲೂಕಾ ಕುರುಬ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಸಮಾಜದ ಹಿರಿಯರಾದ ಶಿವಶಂಕ್ರಪ್ಪ ಕುಂಟೋಜಿ, ಚಂದಾಲಿಂಗ ಹಡಗಲಿ,  ಮಾಜಿ ಗ್ರಾಪಂ ಸದಸ್ಯ ಬಸವರಾಜ ದಳವಾಯಿ, ಮಾಜಿ ತಾಪಂ ಸದಸ್ಯ ಮುಖಂಡ ಬಾಪುರಾಯ ದೇಸಾಯಿ, ಬೀರಪ್ಪ ಪೂಜಾರಿ ಸೇರಿದಂತೆ ಹಡಗಲಿ ಗ್ರಾಮದ ಹಿರಿಯರಿದ್ದರು.

Be the first to comment

Leave a Reply

Your email address will not be published.


*