ರಾಜಕಾರಣಿಯಾಗುವುದು ಸುಲಭ…ಚುಟುಕು ಸಾಹಿತಿಯಾಗುವುದು ಬಲು ಕಷ್ಟ: ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ರಾಜಕಾರಣಿಯಾಗಿ ರಾಜಕೀಯ ಮಾಡುವುದು ಸುಲಭದ ಕೆಲಸವಾಗಿದೆ. ಆದರೆ ಸಹಿತ್ಯ ಕ್ಷೇತ್ರದಲ್ಲಿ ಇಳಿಯುವುದು ಅದರಲ್ಲೂ ಚುಟುಕು ಸಾಹಿತ್ಯ ಬರೆಯುವುದು ಸುಲಭವಲ್ಲ. ಆದರೆ ಇಂತಹ ಕ್ಷೇತ್ರದಲ್ಲಿ ಇಂದಿನ ಆಧುನಿಕ ಯುಗದಲ್ಲೂ ಮುದ್ದೇಬಿಹಾಳ ಪಟ್ಟಣದ ಜನರು ತೊಡಗಿಕೊಂಡಿದ್ದಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ(ಮಡಿಕೇಶ್ವರ) ಹೇಳಿದರು.
ಪಟ್ಟಣದ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತವತಿಯಿಂದ ಹಮ್ಮಿಕೊಳ್ಳಲಾದ ಚುಟುಕುಗೋಷ್ಠಿ, ವಾಚನ, ಸಾಧಕರಿಗೆ ಸನ್ಮಾನ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಾಹಿತ್ಯದ ಸಮಾರಂಭದಲ್ಲಿ ಸಾಹಿತ್ಯ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸನ್ಮಾನಿತರ ಜವಾಬ್ದಾರಿಯನ್ನು ಹೆಚ್ಚಿಸಿದಂತಾಗಿದೆ. ಸನ್ಮಾನ ಸ್ವೀಕರಿಸಿದ ಸಾಧಕರು ಮುಂದಿನ ದಿನಗಳಲ್ಲಿ ಸಮಾಜವದ ಏಳಿಗೆಗಾಗಿ ಶ್ರಮಿಸುವುದು ಕರ್ತವ್ಯವಾಗಿದೆ ಎಂದು ಅವರು ಹೇಳಿದರು.



ಮುಖ್ಯ ಅತಿಥಿಯಾಗಿದ್ದ ಪರಿಷತ್‌ನ ಜಿಲ್ಲಾಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿ, ಜಿಲ್ಲೆಯಲ್ಲಿ ಪರಿಷತ್ ಹೆಮ್ಮರವಾಗಿ ಬೆಳೆಯುತ್ತಿದೆ. ಮೂರು ತಾಲೂಕು ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ಘಟಕ ರಚಿಸಲಾಗಿದೆ. ಉಳಿದ ಮೂರು ತಾಲೂಕು ಘಟಕ ರಚನೆ ನಂತರ ಜಿಲ್ಲೆಯಲ್ಲಿ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತದೆ. ಪರಿಷತ್ತು ಕ್ರಿಯಾಶೀಲ ಚಟುವಟಿಕೆಯ ಜೊತೆಗೆ ಕನ್ನಡಪರ ಕೆಲಸ ಮಾಡುತ್ತಿದೆ. ಮುದ್ದೇಬಿಹಾಳ ಘಟಕ ಹೆಚ್ಚು ಕ್ರಿಯಾಶೀಲವಾಗಿದೆ ಎಂದರು.



ಚುಟುಕು ಸಾಹಿತ್ಯದ ಹುಟ್ಟು, ಅದು ಬೆಳೆದುಬಂದ ದಾರಿಯ ಕುರಿತು ವಿಶೇಷ ಉಪನ್ಯಾಸ ನೀಡಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿದ್ದನಗೌಡ ಬಿಜ್ಜೂರ ಅವರು, ಚುಟುಕು ಕನ್ನಡ ಸಾಹಿತ್ಯದಲ್ಲಿ ಬಲವಾಗಿ ನಿಂತಿದೆ. ಜಗತ್ತಿನ ಎಲ್ಲ ಭಾಷೆಗಳಲ್ಲೂ ಚುಟುಕು ಇದೆ. ಕೆಲವೇ ಸಾಲುಗಳಲ್ಲಿ ಪರಿಣಾಮಕಾರಿ ವಿಷಯ ಮಂಡಿಸುವುದು ಚುಟುಕುಗಳ ಉದ್ದೇಶ. ಓಂ ಜಗತ್ತಿನ ಅತಿ ಸಣ್ಣ ಚುಟುಕು. ಇದು ಅನಾದಿ ಕಾಲದಿಂದಲೂ ಇರುವಂಥದ್ದು. ಜನಪದರು ಅತ್ಯುತ್ತಮ ವಿದ್ವಾಂಸರು. ಎಲ್ಲ ಕನ್ನಡದ ಸಾಹಿತಿಗಳು ಚುಟುಕನ್ನು ಬರೆದಿದ್ದಾರೆ. ಕನ್ನಡದ ಚುಟುಕು ಬ್ರಹ್ಮ ದಿನಕರ ದೇಸಾಯಿ. ದುಂಡಿರಾಜರ ಹನಿಗವನ ಹೆಚ್ಚು ಪ್ರಸ್ತುತವಾಗಿವೆ ಎಂದರು.


ಶ್ರೀ ಬಸವ ವಿದ್ಯಾಪ್ರಸಾರಕ ಸಂಸ್ಥೆಯ ಅಧ್ಯಕ್ಷ ಪ್ರಭುದೇವ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಜಗದೀಶ ಸಾಲಳ್ಳಿ, ಶ್ರೀ ಬಸವ ಸಂಸ್ಥೆಯ ಕಾರ್ಯದರ್ಶಿ ಮುತ್ತಣ್ಣ ಕಡಿ ವೇದಿಕೆಯಲ್ಲಿದ್ದರು. ಶರಣ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್, ಮನೆಯಲ್ಲಿ ಮಹಾಮನೆ ಬಳಗ, ಮೇಘಾ ಸಾಂಸ್ಕೃತಿಕ ಕಲಾ ವೇದಿಕೆ, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸದಸ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.



ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಪುರಸಭೆ ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ, ವಿಜಯಪುರ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ, ಹಿರಿಯ ಪತ್ರಕರ್ತ ಡಿ.ಬಿ.ವಡವಡಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರಿಗೆ ಸ್ಮರಣಿಗೆ ನೀಡಿ ಗೌರವಿಸಲಾಯಿತು.


ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಮಹಾಂತೇಶ ಬಂಗಾರಗುಂಡ, ಚುಟುಕು ಸಾಹಿತಿಗಳಾದ ಗಂಗಾಧರ ಪವಾಡಶೆಟ್ಟಿ, ಮಹಾದೇವಿ ಉಕ್ಕಲಿಮಠ, ಸುನಂದಾ ವಡ್ಡರ ಚುಟುಕು ವಾಚಿಸಿದರು. ಕನ್ನಡ ರಾಜ್ಯೋತ್ಸವ ಹಿನ್ನೆಲೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಸಹನಾ ಆಲಕಟ್ಟಿ, ಅನ್ನಪೂರ್ಣ ನಂದರಗಿ, ಶ್ರೀರಕ್ಷಾ ನಿಡಗುಂದಿಮಠ, ಶ್ರೀರಕ್ಷಾ ಅಕ್ಕೂರ, ಪ್ರತೀಕ್ಷಾ ನಂದರಗಿ ಇವರಿಗೆ ಬಹುಮಾನ ವಿತರಿಸಲಾಯಿತು.
ಪವಿತ್ರ ಪಾಟೀಲ ಪ್ರಾರ್ಥಿಸಿದರು. ಶಿಕ್ಷಕ ಗುರುರಾಜ ಕನ್ನೂರ ಸ್ವಾಗತಿಸಿ ಅತಿಥಿ ಪರಿಚಯ ಮಾಡಿಕೊಟ್ಟರು. ಪರಿಷತ್ ಅಧ್ಯಕ್ಷ ಪ್ರಕಾಶ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಾಧ್ಯಾಪಕ ವಿನೋದ ಪಟಗಾರ ನಿರೂಪಿಸಿದರು. ಶಿಕ್ಷಕಿ ಗೀತಾ ರಾಂಪೂರ ವಂದಿಸಿದರು.

 

 

 

 

 

 

Be the first to comment

Leave a Reply

Your email address will not be published.


*