ಕಲಬುರಗಿ ಸಾಹಿತ್ಯ ಲೋಕದ ನಾಡೋಜ ಡಾ| ಗೀತಾ ನಾಗಭೂಷಣ ಇನ್ನಿಲ್ಲ

ವರದಿ: ಅಮರೇಶ ಕಾಮನಕೇರಿ

ಕಲಬುರಗಿ: ಖ್ಯಾತ ಸಾಹಿತಿ, ಹಿರಿಯ ಲೇಖಕಿ, ನಾಡೋಜ ಡಾ|ಗೀತಾ ನಾಗಭೂಷಣ (78) ರವಿವಾರ ರಾತ್ರಿ ನಿಧನ ಹೊಂದಿದರು.

ಇಲ್ಲಿನ ಸ್ವಸ್ತಿಕ್‌ ನಗರದ ನಿವಾಸಿಯಾಗಿದ್ದ ಅವರಿಗೆ ಸಂಜೆ ವೇಳೆಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಫ‌ಲಕಾರಿಯಾಗಲಿಲ್ಲ.

1942ರ ಮಾರ್ಚ್‌ 25ರಂದು ಕಲಬುರಗಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಗೀತಾ ಜನಿಸಿದ್ದರು. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.

2010ರಲ್ಲಿ ಗದುಗಿನಲ್ಲಿ ನಡೆದ ಅಖೀಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು; 1968ರಲ್ಲಿ “ತಾವರೆ ಹೂ’ ಎನ್ನುವ ಪ್ರಥಮ ಕಾದಂಬರಿಯೊಂದಿಗೆ ಸಾಹಿತ್ಯ ಕೃಷಿ ಆರಂಭಿಸಿದ್ದರು. 27 ಪ್ರಸಿದ್ಧ ಕಾದಂಬರಿಗಳನ್ನು ಬರೆದಿದ್ದಾರೆ. 12 ನಾಟಕ, ಎರಡು ಕವನ ಸಂಕಲನ, ಒಂದು ಸಂಪಾದನ ಹಾಗೂ ಒಂದು ಸಂಶೋಧನಾ ಕೃತಿ ಜತೆಗೆ 50 ಸಣ್ಣ ಕಥೆಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.

“ಬದುಕು’, “ಹಸಿವು’ ಇವರ ಶ್ರೇಷ್ಠ ಕಾದಂಬರಿಗಳಾಗಿವೆ. “ಬದುಕು’ ಕಾದಂಬರಿಗೆ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತ್ತು. ಈ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಮಹಿಳಾ ಸಾಹಿತಿ ಎನ್ನುವ ಹೆಗ್ಗಳಿಕೆ ಇವರದ್ದು. ಅಲ್ಲದೇ ಹಂಪಿ ವಿಶ್ವವಿದ್ಯಾಲಯದಿಂದ “ನಾಡೋಜ’ ಗೌರವ ಪಡೆದ ಮೊದಲ ಮಹಿಳಾ ಸಾಹಿತಿಯೂ ಇವರೇ. ಗುಲಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್‌, ಅತ್ತಿಮಬ್ಬೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು 2012ರಲ್ಲಿ ಕೊಲ್ಕತ್ತಾದ ಭಾರತೀಯ ಭಾಷಾ ಪರಿಷತ್‌ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಮಹಿಳಾ ಸಾಹಿತಿಯಾಗಿ ಪಡೆದವರಲ್ಲಿ ಪ್ರಥಮರಾಗಿದ್ದಾರೆ. ಬಡತನ, ಅಸಹಕಾರ, ಪರಿಸರ, ಹೆಣ್ಣು ಮಕ್ಕಳ ಶಿಕ್ಷಣ ಮುಂತಾದ ವಿಷಯಗಳ ಕುರಿತು ತಮ್ಮ ಕಾದಂಬರಿಗಳಲ್ಲಿ ಬಿಂಬಿಸಿದ್ದರು.

ಕಳೆದ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ ನಡೆದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಇವರು ಪಾಲ್ಗೊಂಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಜನ್ಮಸ್ಥಳ

ಗೀತಾ ನಾಗಭೂಷಣ, ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಮಾರ್ಚ್ ೨೫, ೧೯೪೨ರಲ್ಲಿ ಶಾಂತಪ್ಪ, ಶರಣಮ್ಮದಂಪತಿಗಳ ಪ್ರೀತಿಯ ಮಗಳಾಗಿ ಜನಿಸಿದರು. ಕಲ್ಬುರ್ಗಿಯ ಕನ್ಯಾ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಪಾ ್ರಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ ಗೀತಾ, ಗುಲ್ಬರ್ಗಾದ ಕಲೆಕ್ಟರ್ ಆಫೀಸಿನಲ್ಲಿ ಗುಮಾಸ್ತೆಯ ಕೆಲಸಕ್ಕೆ ಸೇರಿದರು. ಅಲ್ಲಿ ದುಡಿಯುತ್ತಲೇ, ಶರಣಬಸವೇಶ್ವರ ಕಲಾಕಾಲೇಜಿನಲ್ಲಿ ಪದವಿಗಳಿಸಿದರು. ಬಿ. ಎ. ಮುಗಿಸಿದ ನಂತರ, ಗುಮಾಸ್ತ ಹುದ್ದೆಯನ್ನು ತೊರೆದು, ಶರಣಬಸಪ್ಪ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇರಿ, ಬಿ. ಎಡ್ ಮುಗಿಸಿದರು. ತದನಂತರ, ಸೊಲ್ಲಾಪುರದ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ಗುಲ್ಬರ್ಗಾದ ನಾಗೇಶ್ವರ ಸಂಯುಕ್ತ ಪದವೀಪೂರ್ವ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಅಲ್ಲಿಯೇ ಪ್ರಾಂಶುಪಾಲರೂ ಆಗಿ, ಒಟ್ಟು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು.

ಸಾಹಿತ್ಯ ಕೃಷಿಯಲ್ಲಿಯ ಸಾಧನೆ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಡಾ. ಗೀತಾ ನಾಗಭೂಷಣರು ಹೇಳಿದ ಮಾತುಗಳು ಮಾರ್ಮಿಕವಾಗಿವೆ. “ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ.”

ಪ್ರಶಸ್ತಿಗಳು

ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್
ಅತ್ತಿಮಬ್ಬೆ ಪ್ರಶಸ್ತಿ,
ನಾಡೋಜ ಪ್ರಶಸ್ತಿ (ಮೊದಲ ಮಹಿಳಾ ಸಾಹಿತಿ)
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ – ೨೦೦೪ (‘ಬದುಕು’ ಕಾದಂಬರಿಗೆ ಮತ್ತು ಕರ್ನಾಟಕದ ಮೊದಲ ಮಹಿಳಾ ಸಾಹಿತಿ)
ಮಾಣಿಕ ಬಾಯಿ ಪಾಟೀಲ್ ಪ್ರತಿಷ್ಠಾನದ ಪ್ರಶಸ್ತಿ (‘ಬದುಕು’ ಕಾದಂಬರಿಗೆ)
ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (‘ಬದುಕು’ ಕಾದಂಬರಿಗೆ)
ಸರ್. ಎಂ. ವಿಶ್ವೇಶ್ವರಯ್ಯ ದಶಮಾನೋತ್ಸವ ಸಾಹಿತ್ಯ ಪ್ರಶಸ್ತಿ (‘ಬದುಕು’ ಕಾದಂಬರಿಗೆ)
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (ಸಮಗ್ರ ಕೃತಿಗಳಿಗಾಗಿ)
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಸಮಗ್ರ ಕೃತಿಗಳಿಗಾಗಿ)
ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ
ಬಸವರಾಜ ಕಟ್ಟೀಮನಿ ಕಾದಂಬರಿ ಪ್ರಶಸ್ತಿ
ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಬಳಗ ನೀಡಿದ ಅನುಪಮಾ ಪ್ರಶಸ್ತಿ
ಆರ್ಯಭಟ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿ
ರತ್ನಮ್ಮ ಸಾಹಿತ್ಯ ಪ್ರಶಸ್ತಿ
ಗೊರೂರು ಪ್ರಶಸ್ತಿ
ಧರ್ಮಸ್ಥಳದ ಸಾಹಿತ್ಯ ಪ್ರಶಸ್ತಿ
ಪ್ರೊ. ಆಲಗುರ ಪ್ರಶಸ್ತಿ
ಉತ್ತಮ ಉಪನ್ಯಾಸಕಿ ಪ್ರಶಸ್ತಿ,
ಗುಲ್ಬರ್ಗಾದ ಎಸ್. ಆರ್. ಪಾಟೀಲ್ ಮಹಾಂತ ಜ್ಯೋತಿ’ ಪ್ರತಿಷ್ಠಾನದ ಕಾಯಕ ರತ್ನ ಪ್ರಶಸ್ತಿ
ಕನ್ನಡಸಾಹಿತ್ಯ ಪರಿಷತ್ತಿನ ಮಲ್ಲಿಕಾ ಮತ್ತು ರಾಜಾರಾಮ್ ದತ್ತಿ ಪ್ರಶಸ್ತಿಗಳು (`ಆಘಾತ’ ಮತ್ತು `ದಂಗೆ’ ಕಾದಂಬರಿಗಳಿಗೆ ಅನುಕ್ರಮವಾಗಿ)
ಮಾರ್ದನಿ ಪತ್ರಿಕೆಯ ಉತ್ತಮ ಕಾದಂಬರಿ ಬಹುಮಾನ (‘ನೋವು’ ಕಾದಂಬರಿಗೆ )
ಉಮಾಪತಿ ಚುಕ್ಕಿ ಪ್ರತಿಷ್ಠಾನ ಸಿರವಾರದ ಪ್ರಶಸ್ತಿ (‘ಧುಮ್ಮಸು’ ಕಾದಂಬರಿಗೆ)
ಭಾರತೀಯ ಭಾಷಾ ಪರಿಷದ್ ಕೋಲ್ಕತ್ತಾದ ‘ರಚನಾ ಸಮಗ್ರ ಪ್ರಶಸ್ತಿ’
ಡಾ. ಗೀತಾ ನಾಗಭೂಷಣರು ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೨೦೧೨ರಲ್ಲಿ ಗೀತಾ ನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದುಕೊಟ್ಟಿದ್ದಾರೆ

Be the first to comment

Leave a Reply

Your email address will not be published.


*