ಮುದ್ದೇಬಿಹಾಳ: ವಿಜೃಂಭನೆಯಿಂದ ಚಾಲನೆಗೊಂಡ ಗ್ರಾಮದೇವತೆ ಜಾತ್ರೆ…!!! ಮೊದಲ ದಿನವೇ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾದ ಜಾತ್ರಾ ಕಮೀಟಿ ಸದಸ್ಯರು..!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ಮೇ.3:

CHETAN KENDULI

ಪಟ್ಟಣದಲ್ಲಿ ಐದು ವರ್ಷಗಳ ನಂತರ ಶುರುವಾದ ಗ್ರಾಮ ದೇವತೆ ಜಾತ್ರೆಗೆ ಸಡಗರ ಸಂಭ್ರಮದ ಚಾಲನೆ ನೀಡಲಾಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆ ಪಟ್ಟಣದ ಅತೀ ದೊಡ್ಡ ಜಾತ್ರೆಯಾಗಿದ್ದು, ಇಡೀ ಊರಿನ ಜನರು ಜಾತ್ರೆಯನ್ನು ಸಂಭ್ರಮದಿಂದ ಜಾತಿ ಬೇಧ ಮರೆತು ಸೇರಿ ಮಾಡುತ್ತಾರೆ ಎಂಬುದು ವಿಶೇಷ.



ಬೆಳಿಗ್ಗೆ 7 ಗಂಟೆಗೆ ಗ್ರಾಮದೇವತೆಯ ಸಹೋದರಿ ಶಾರದಾದೇವಿಯನ್ನು ಶಾರದಾ ಗುಡಿಯಿಂದ ಮೆರವಣಿಗೆಯಲ್ಲಿ ಕಿಲ್ಲಾಕ್ಕೆ ಡೊಳ್ಳು ವಾದ್ಯದೊಂದಿಗೆ ಹೊರಪೇಟಿ ಬಡಾವಣೆಯ ನಿವಾಸಿಗಳು ತಂದರು. ಗ್ರಾಮ ದೇವತೆಯರಾದ ದ್ಯಾಮವ್ವ ದೇವಿ ಹಾಗೂ ಶಾರದಾದೇವಿಯರನ್ನು ಬೆಳಿಗ್ಗೆ ಕಿಲ್ಲಾದ ಹೊಸಮಠದ ಗುಂಡಪ್ಪನ ಬಾವಿಯಲ್ಲಿ ಶಾಸ್ತ್ರೋಕ್ತವಾಗಿ ಗಂಗಾ ಸ್ನಾನ ಮಾಡಿಸಲಾಯಿತು. ನಂತರ ದೇವತೆಯರ ಮೆರವಣಿಗೆಗೆಂದೇ ತಯಾರಿಸಲಾಗಿದ್ದ ಎರಡು ವಿಶೇಷ ಬಂಡಿಗಳಲ್ಲಿ ದೇವತೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ನಂತರ ಮೆರವಣಿಗೆ ಶುರುವಾಯಿತು. ಊರ ಗೌಡರಾದ ಬಸನಗೌಡ ಪಾಟೀಲರನ್ನು ಸಹ ಗಾಡಿಯಲ್ಲಿ ಕೂಡಿಸಿ ಮೊದಲಿಂದಲೂ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಆದ್ಯತೆ ನೀಡಲಾಗಿತ್ತು.



ಬೆಳಿಗ್ಗೆ 8 ಗಂಟೆಗೆ ಶುರುವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದು ಮರಳಿ ದ್ಯಾಮವ್ವದೇವಿಯ ಕಟ್ಟೆಯ ಮೇಲೆ ಪ್ರತಿಷ್ಠಾಪನೆಯಾಗು ವೇಳೆ ಸಂಜೆಯಾಗಿತ್ತು. ಕಿಲ್ಲಾದಿಂದ ಶುರುವಾದ ಮೆರವಣಿಗೆ ಸರಾಫ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ರಾಘವೇಂದ್ರ ಮಠ, ಮಹರ್ಷಿ ವಾಲ್ಮೀಕಿ ವೃತ್ತ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಮಾರ್ಗವಾಗಿ ದ್ಯಾಮವ್ವನ ಕಟ್ಟೆ ಸೇರಿತು. ಮೆರವಣಿಗೆಯಲ್ಲಿ ನಾಸಿಕದಿಂದ ಬಂದಿದ್ದ ಯುವತಿಯರೇ ತುಂಬಿದ್ದ ಡೋಲು ಬಾರಿಸುವ ತಂಡ, ಚಿಕ್ಕಮಗಳೂರಿನ ವೀರಗಾಸೆ ತಂಡ, ತುಮಕೂರಿನ ಗಾರುಡಿಗ ಗೊಂಬೆ, ಬಳಗ, ಉಡುಪಿಯ ಚಂಡಿ ವಾದ್ಯ, ಬೃಹತ್ ಹಣಮಂತನ ವೇಷಧಾರಿಯ ನಡಿಗೆ, ತೆಲಗಿಯ ಕರಡಿ ಮಜಲು, ವನಹಳ್ಳಿಯ ಕುದರೆ ಕುಣಿತ



ಕೋರವಾರದ ಹಲಗಿ ಮೇಳ, ಎರಡು ತಂಡಗಳಲ್ಲಿದ್ದ ಜೋಗತಿಯರ ನೃತ್ಯ ಜಾತ್ರೆಯ ಸೊಬಗನ್ನು ಹೆಚ್ಚಿಸಿದ್ದವು. ಗದ್ದಲದ ಮಧ್ಯೆಯೂ ಜನರು ಆನೆಯಿಂದ ತಮಗೆ ಹಾಗೂ ಮಕ್ಕಳಿಗೆ ಆಶೀರ್ವಾದ ಮಾಡಿಸುತ್ತಿದ್ದ ದೃಶ್ಯ, ಹನಮಂತ, ಬೃಹತ್ ನಂದಿ, ಬೃಹತ್ ಕುದುರೆಯ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮೆರವಣಿಗೆಯಲ್ಲಿ ಸಾಗಿ ಬಂದ ಇಬ್ಬರೂ ದೇವತೆಯರನ್ನು ಕಣ್ತುಂಬಿಕೊಳ್ಳಲು ಬೀದಿಗುಂಟ ಜನರು ಸಾಲುಗಟ್ಟಿ ನಿಂತು ದರ್ಶನ ಪಡೆದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾತಂಡಗಳ ಪ್ರದರ್ಶನ ನೋಡಲು ಮನೆಯ ಮಹಡಿ, ವಾಣಿಜ್ಯ ಮಳಿಗೆಗಳನ್ನು ಏರಿ ನಿಂತು ವೀಕ್ಷಿಸಿದರು. ಜಾತ್ರೆಗೆಂದೇ ಯುವಕರು ಬಿಳಿ ಬಣ್ಣದ ಧಿರಿಸನ್ನು ಹೊಲಿಸಿ ಜಾತ್ರೆಯುದ್ದಕ್ಕೂ ಓಡಾಡುತ್ತ ಜಾತ್ರೆಯ ಯಶಸ್ಸಿಗೆ ಶ್ರಮಿಸಿದ್ದು ವಿಶೇಷವಾಗಿತ್ತು. ಐದು ದಿನಗಳ ಕಾಲ ನಡೆಯುವ ಜಾತ್ರೆಗೆ ಬರುವ ಭಕ್ತರ ಪ್ರಸಾದಕ್ಕೆಂದು ಹಳೆಯ ಪೊಲೀಸ್ ವಸತಿ ಗೃಹಗಳ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೋಳೂರ ಗ್ರಾಮದ ಅಡುಗೆ ತಯಾರಿಸುವ ಹಾಗೂ ಪ್ರಸಾದಕ್ಕೆ ಬಂದ ಜನರಿಗೆ ಪ್ರಸಾದ ವಿತರಿಸುವ ವ್ಯವಸ್ಥೆ ಹೊತ್ತುಕೊಂಡಿದೆ.



ಜಾತ್ರೆಯ ನಿಮಿತ್ತ ಇಡೀ ಪಟ್ಟಣವೇ ಶೃಂಗಾರಗೊಂಡಿದ್ದು ಯುವಕರು ತಮ್ಮ ಧುರೀಣರ ಭಾವಚಿತ್ರಗಳೊಂದಿಗೆ ನೂರಾರು ಬೃಹತ್ ಫ್ಲೆಕ್ಸ್, ಕಟೌಟ್ ನಿಲ್ಲಿಸಿದ್ದು ಜಾತ್ರೆ ಸಂಭ್ರಮ ಹೆಚ್ಚಲು ಕಾರಣವಾಗಿತ್ತು. ತಳಿರು, ತೋರಣ, ಮದುಣಗಿತ್ತಿಯಂತೆ ಸಿಂಗರಿಸಿಕೊಂಡ ಇಡೀ ಪಟ್ಟಣದ ದೀಪಾಲಂಕಾರ ಮಾಡಲಾಗಿದ್ದು, ದೇಗುಲ, ಮಸೀದೆ ಸೇರಿದಂತೆ ಎಲ್ಲ ಬೃಹತ್ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡಿದ್ದವು. ಉತ್ಸವದಲ್ಲಿ ಜಾತ್ರಾ ಕಮೀಟಿಯ ಅಧ್ಯಕ್ಷೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಗಣ್ಯರಾದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಎಂ.ಎನ್.ಮದರಿ, ವಿವಿಧ ಉಸ್ತುವಾರಿ ನೇತೃತ್ವ ವಹಿಸಿಕೊಂಡಿದ್ದ ಸತೀಶಕುಮಾರ ಓಸ್ವಾಲ, ಪ್ರಭುರಾಜ ಕಲಬುರ್ಗಿ, ಮುರಿಗೆಪ್ಪ ಮೋಟಗಿ, ಶರಣು ಸಜ್ಜನ, ಸುನೀಲ ಇಲ್ಲೂರ, ಸಂಗಣ್ಣ ಬಿರಾದಾರ, ಸುಧೀರ ನಾವದಗಿ, ಸಂಗಣ್ಣ ಕಡಿ, ಬಾಬು ಬಿರಾದಾರ, ಕಾಮರಾಜ ಬಿರಾದಾರ, ಸಿದ್ದರಾಜ ಹೊಳಿ, ಲಾಡ್ಲೇಮಶ್ಯಾಕ ನಾಯ್ಕೋಡಿ, ರಾಜು ಕರಡ್ಡಿ, ನೇತಾಜಿ ನಲವಡೆ, ಸತೀಶ ಕುಲಕರ್ಣಿ, ಚಂದ್ರಶೇಖರ ಕಲಾಲ, ಸುರೇಶ ಕಲಾಲ, ಮಾರುತಿ ನಲವಡೆ, ನಾಗಭೂಷಣ ನಾವದಗಿ, ಅಶೋಕ ರೇವಡಿ, ರವಿ ಗೂಳಿ, ರವಿ ತಡಸದ, ಭರತ ಭೋಸಲೆ, ಪ್ರವೀಣ ನಾಗಠಾಣ, ಎಂ.ಎಚ್.ಹಾಲಣ್ಣವರ, ಸಂಗಪ್ಪ ಮೇಲಿನಮನಿ, ಕಾಶೀಬಾಯಿ ರಾಂಪೂರ, ಶ್ರೀನಿವಾಸ ಇಲ್ಲೂರ, ಮುತ್ತು ರಾಯಗೊಂಡ, ಹಣಮಂತ ನಲವಡೆ ಸೇರಿದಂತೆ ವಿವಿಧ ಸಮಾಜಗಳ ನೂರಾರು ಯುವಕರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.



Be the first to comment

Leave a Reply

Your email address will not be published.


*