ಕಾರವಾರ:
ಓಸಿ ದಂಧೆಗೆ ಜಿಲ್ಲೆಯಲ್ಲಿ ಯಾರಿದಂಲೂ ಬ್ರೇಕ್ ಹಾಕಲು ಸಾಧ್ಯವಿಲ್ಲ ಎನ್ನುವ ಮಾತು ಈ ಹಿಂದೆ ಕೇಳಿ ಬರುತ್ತಿತ್ತು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಪೆನ್ನೇಕರ್ ಅವರ ಕಠಿಣ ನಿಲುವಿನಿಂದ ಜಿಲ್ಲೆಯಲ್ಲಿ ಓಸಿ ದಂದೆಗೆ ಬ್ರೇಕ್ ಬಿದ್ದಿದ್ದು, ಇಷ್ಟುದಿನ ರಾಜಾರೋಷವಾಗಿ ಇದ್ದ ಬುಕ್ಕಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಡೆ ನಡುಕ ಹುಟ್ಟಿಸಿದೆ.
ಜಿಲ್ಲೆಯಲ್ಲಿ ಓಸಿ ದಂದೆ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಹಲವರು ದುಡ್ಡಿನ ಆಸೆಗೆ ಬಿದ್ದು ಮನೆಮಠವನ್ನ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ದೂರು ಹಿಂದಿನಿಂದ ಕೇಳಿ ಬಂದಿತ್ತು. ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಎಗ್ಗಿಲ್ಲದೇ ದಂದೆ ನಡೆಯುತ್ತಿದ್ದು ಪೊಲೀಸರು ಗೊತ್ತಿದ್ದರು ಗೊತ್ತಿಲ್ಲದಂತೆ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ರಾಜಕೀಯ ಪಕ್ಷದ ಮುಖಂಡರೇ ಈ ಓಸಿ ದಂಧೆಯ ಹಿಂದೆ ಸಹ ಇದ್ದರು ಎನ್ನುವ ಆರೋಪವಿತ್ತು.
ಆದರೆ ಸದ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಪೆನ್ನೇಕರ್ ಜಿಲ್ಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದು ಬಹುತೇಕ ಕಡೆ ಓಸಿ ದಂದೆ ಬಂದ್ ಆಗಿದೆ ಎನ್ನಲಾಗಿದೆ. ಇನ್ನು ಎಲ್ಲಾ ಠಾಣೆಗಳ ಮೇಲಾಧಿಕಾರಿಗಳಿಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಓಸಿ ಚಟುವಟಿಕೆ ನಡೆಯುವಂತಿಲ್ಲ. ಒಂದೊಮ್ಮೆ ಗಮನಕ್ಕೆ ಬಂದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಕಡಕ್ ಎಚ್ಚರಿಕೆಯನ್ನ ನೀಡಿದ್ದಾರೆ ಎನ್ನಲಾಗಿದೆ.
ಓಸಿ ಬಂದ್ ಮಾಡುವಂತೆ ಈ ಹಿಂದೆಯೇ ಪೊಲೀಸರು ಬುಕ್ಕಿಗಳಿಗೆ ವಾರ್ನಿಂಗ್ ಮಾಡಿದ್ದರು. ಇದರ ನಡುವೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಓಸಿ ದಂದೆಯನ್ನ ನಡೆಸುತ್ತಿದ್ದರು. ಅದರಲ್ಲೂ ಶಿರಸಿ, ಅಂಕೋಲಾ, ಯಲ್ಲಾಪುರ, ಹಳಿಯಾಳದಂತಹ ಕೆಲ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಚಟುವಟಿಕೆ ನಡೆಯುತ್ತಿತ್ತು.
ಸದ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ತಡೆಗೆ ವಿಶೇಷ ತಂಡವೊಂದನ್ನ ರಚಿಸಿದ್ದು ಆ ತಂಡದ ಮೂಲಕ ಓಸಿ ಬುಕ್ಕಿಗಳನ್ನ ಬಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಓಸಿ ಚಟುವಟಿಕೆ ನಡೆಸುತ್ತಿದ್ದ 50ಕ್ಕೂ ಅಧಿಕ ಪ್ರಕರಣಗಳನ್ನ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಈ ಹಿಂದೆ ಓಸಿ ಬುಕ್ಕಿಗಳು ಯಾರದೇ ಭಯವಿಲ್ಲದೇ ದೊಡ್ಡ ಮಟ್ಟದಲ್ಲಿಯೇ ಓಸಿ ಆಡಿಸುತ್ತಿದ್ದರು. ಆದರೆ ಸದ್ಯ ಸಣ್ಣಮಟ್ಟದಲ್ಲೂ ಓಸಿ ಆಡುವ ವಿಚಾರ ಎಸ್ ಪಿ ಗಮನಕ್ಕೆ ತಂದರೇ ಅಂತವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಕಾರ್ಯವನ್ನ ಪೊಲೀಸರಿಗೆ ಎಸ್ ಪಿ ಸೂಚಿಸಿದ್ದು ಯಾವುದೇ ಹಳ್ಳಿಯಲ್ಲೂ ಓಸಿ ಚಟುವಟಿಕೆ ನಡೆಸುತ್ತಿರುವ ಗಮನಕ್ಕೆ ಬಂದರೆ ಮುಲಾಜಿಲ್ಲದೇ ಕೇಸ್ ಮಾಡುವ ಕಾರ್ಯಕ್ಕೆ ಇಳಿದಿದ್ದು ಇದರಿಂದ ಓಸಿ ಬುಕ್ಕಿಗಳಿಗೆ ನಡುಕ ಹುಟ್ಟಿದ್ದು ಬಹುತೇಕ ಎಲ್ಲಾ ತಾಲೂಕುಗಳಲ್ಲಿ ತಮ್ಮ ಚಟುವಟಿಕೆಗಳನ್ನ ಬಂದ್ ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಶಿರಸಿಯಲ್ಲಿ 15ಕ್ಕೂ ಹೆಚ್ಚು ಬುಕ್ಕಿಗಳ ಬಂಧನ: ಪೊಲೀಸರ ಕಟ್ಟೆಚ್ಚರದ ನಡುವೆಯೂ ಶಿರಸಿಯಲ್ಲಿ ಓಸಿ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಗುರುವಾರ ಎಸ್.ಪಿ ಸ್ಕ್ವಾಡ್ ನವರು ನಗರದ ವಿವಿದೆಡೆ ದಾಳಿ ನಡೆಸಿ 15ಕ್ಕೂ ಹೆಚ್ಚು ಓಸಿ ಬುಕ್ಕಿಗಳನ್ನ ಬಂಧಿಸಿದ್ದಾರೆ ಎನ್ನಲಾಗಿದೆ.
ಶಿರಸಿ ನಗರದಲ್ಲಿ ಓಸಿ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಸಾರ್ವಜನಿಕರು ದೂರನ್ನ ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊನ್ನಾವರ ಸಿ.ಪಿ.ಐ ಶ್ರೀಧರ್ ನೇತೃತ್ವದಲ್ಲಿನ ತಂಡ ಏಕಕಾಲದಲ್ಲಿ ನಗರದ ವಿವಿದೆಡೆ ದಾಳಿ ನಡೆಸಿ ಓಸಿ ಬುಕ್ಕಿಗಳನ್ನ ಹಾಗೂ ದಂದೆಗೆ ಬಳಸಿದ್ದ ಹಣವನ್ನ ವಶಕ್ಕೆ ಪಡೆದಿದ್ದಾರೆ.
Be the first to comment