ರಾಜ್ಯ ಸುದ್ದಿಗಳು
ಹರಿಹರ:
ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ದೇವಸ್ಥಾನವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿದ್ದಾರೆ. ಮುಂಚೆ ಹೋದಾಗ ದೇವಸ್ಥಾನ ಎಲ್ಲಿದೆ ಎಂದು ಹುಡುಕಬೇಕಿತ್ತು. ಇಂದು ಎಲ್ಲಾ ಘಾಟ್‍ಗಳನ್ನು ಸ್ವಚ್ಛಗೊಳಿಸಿ, ದೇವಸ್ಥಾನವನ್ನು ಭವ್ಯವಾಗಿ ಕಾಣುವಂತೆ ಮಾಡಿ ಗಂಗಾ ಆರತಿ ಮಾಡುತ್ತಿದ್ದಾರೆ. ಅದೇ ರೀತಿ ದಕ್ಷಿಣದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ವೈಭವವಾಗಿ ನಡೆಯಬೇಕೆಂದು ನಮ್ಮೆಲ್ಲರ ಬಯಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಶ್ರೀ ವಚನಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಹರಿಹರೇಶ್ವರದಿಂದ ನಡಿಗೆಪಥ, ನದಿಗಳ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಪ್ರದೇಶಗಳಲ್ಲಿ ನದಿ ಕಲುಷಿತವಾದಂತೆ ತಡೆಯಲು ಇದೇ ಯೋಜನೆಯಡಿ ಕಾರ್ಯಕ್ರಮವನ್ನು ರೂಪಿಸಲಾಗುವುದು. ಹರಿಹರ ಹೆಸರಿನಲ್ಲಿಯೇ ಸಂಗಮವಿದೆ. ಹರಿ ಮತ್ತು ಹರ ಎರಡು ಶಕ್ತಿಗಳು, ಹರಿಹರರ ಶಕ್ತಿಯ ಸಂಗಮ ಯಾವಾಗಲೂ ಅಧ್ಭುತ ಪರಿಣಾಮಗಳನ್ನು ನೀಡಿವೆ ಎಂದರು.
ಅವರು ಇಂದು ಹರಿಹರದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮದ ಪ್ರಯುಕ್ತ 108 ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ತುಂಗಭದ್ರೆಯ ತಟದಲ್ಲಿ ಅದ್ಭುತವಾದ ಪ್ರವಾಸೀ ತಾಣ ಹಾಗೂ ಇತರೆ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಭಿವೃದ್ಧಿ ನಿರಂತರ ಪ್ರಕ್ರಿಯೆ. ಈ ದಿಸೆಯಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದೆ. ಹರಿಹರದಲ್ಲಿ ಮುಂಬೈ –ಚನ್ನೈ ಕಾರಿಡಾರ್‍ನಲ್ಲಿ ಬರಲಿದೆ. ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು. ಹರಿಹರದಲ್ಲಿ 40 ಕಿ.ಮೀ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ 20 ಕೋಟಿ ರೂ.ಗಳನ್ನು ನನ್ನ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದೆ. 59 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುಮೋದನೆಯನ್ನು ನೀಡಲಾಗಿದೆ. ಪೋಲಿಸ್ ಪಬ್ಲಿಕ್ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ನಗರೋತ್ಥಾನ ಯೋಜನೆಯಡಿ ಹರಿಹರ ನಗರಕ್ಕೆ 40 ಕೋಟಿ ರೂ.ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ ಎಂದರು.
ನಾಗರಿಕತೆ ಮತ್ತು ಸಂಸ್ಕೃತಿ:
ಪಂಚಭೂತಗಳಲ್ಲಿ ಅತ್ಯಂತ ಮಹತ್ವದ ಜಲಮೂಲದ ರಕ್ಷಣೆ, ಸ್ವಚ್ಛತೆ ಅತ್ಯಂತ ಮಹತ್ವದ್ದು, 5000 ವರ್ಷಗಳಿಂದಲೂ ಜನವಸತಿ ನದಿತಟಗಳಲ್ಲಿಯೇ ಆಗಿದ್ದು, ಜಲಮೂಲ ಜೀವನಕ್ಕೆ ಮುಖ್ಯ. ಪ್ರತಿ ನದಿಯೂ ತನ್ನದೇ ಸಂಸ್ಕೃತಿಯನ್ನು ಬೆಳೆಸಿದೆ. ನಾಗರಿಕತೆ ಮತ್ತು ಸಂಸ್ಕೃತಿ ಒಟ್ಟಿಗೆ ಬೆಳೆದಿವೆ. ನಾಗರೀಕತೆಯನ್ನೇ ಸಂಸ್ಕøತಿ ಎಂದು ಭಾವಿಸುವವರು ಇದ್ದಾರೆ. ಬದಲಾವಣೆ ನಾಗರೀಕತೆಯಾದರೆ ನಾವೇನು ಆಗಿದ್ದೇವೋ ಅದು ಸಂಸ್ಕೃತಿ. ಮಾನವೀಯ ಗುಣಗಳು, ಉದಾರತೆ, ಪರೋಪಕಾರ, ಕರುಣೆ ಕಡಿಮೆಯಾಗುತ್ತಾ ಬಂದಿವೆ. ತುಂಗಭದ್ರೆಯ ತಟದಲ್ಲಿ ನಾಗರಿಕತೆ ಬೆಳೆದಿದೆ. ಸಂಸ್ಕೃತಿ ಬೆಳೆಯಬೇಕೆಂಬ ಕಾರಣದಿಂದ ಕಾರ್ಯಕ್ರಮವನ್ನು ರೂಪಿಸಿದ್ದಾರೆ.
ಸಮಗ್ರ ಅಭಿವೃದ್ಧಿ:
ವಿಜ್ಞಾನ ಮತ್ತು ತತ್ವಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡೂ ಪರಸ್ಪರ ಪ್ರೇರಣೆಯನ್ನು ನೀಡುತ್ತವೆ. ಇದನ್ನು ಅರ್ಥಮಾಡಿಕೊಂಡು ಅಣು ವಿಭಜನೆಯಾದರೆ ಶಕ್ತಿ ಉತ್ಪಾದನೆಯಾಗುತ್ತದೆ. ಅಣುಗಳ ಮಿಲನದಿಂದ ಅದರ ಸಾವಿರಾರು ಪಟ್ಟಿನ ಶಕ್ತಿಯನ್ನು ಉತ್ಪಾದನೆ ಮಾಡುತ್ತದೆ. ಅಂಥ ಶಕ್ತಿ, ಭಕ್ತಿಯೆ ಕೇಂದ್ರ ಹರಿಹರ. ಇನ್ನು ಮುಂದೆ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿ, ಇದೇ ವರ್ಷ ಪ್ರಾರಂಭಿಸಲಾಗುವುದು ಎಂದರು.
ಸಮಗ್ರ ಕರ್ನಾಟಕದ ಚಿಂತನೆ ನಮ್ಮದಾಗಿದ್ದು, ದಾವಣಗೆರೆ- ಹರಿಹರ ಕರ್ನಾಟಕದ ಮಧ್ಯ ಭಾಗ. ಇದರ ಅಭಿವೃದ್ದಿಗೂ ನಾವು ಹೆಚ್ಚಿನ ಗಮನ ನೀಡಲಾಗುವುದು ಎಂದು ಭರವಸೆ ನೀಡಿದರು. ದಾವಣಗೆರೆ -ಹರಿಹರ ಅವಳಿ ನಗರಗಳ ಅಭಿವೃದ್ಧಿಗೆ ನಗರಾಭಿವೃದ್ಧಿ ಸಚಿವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
Be the first to comment