ಶಾಲಾ ಹಂತದಲ್ಲಿ ವಿದ್ಯಾರ್ಥಿನೀಯರಿಗೆ ಆತ್ಮರಕ್ಷಣೆ ತರಬೇತಿ ಹಾಗೂ ಆರೋಗ್ಯಕ್ಕೆ ಸಹಕಾರಿ –  ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ಓಬವ್ವ ಸ್ವಯಂ ಆತ್ಮ ರಕ್ಷಣೆ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ 

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ತಾಲೂಕಿನ ಬೊಮ್ಮವಾರ ಬಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸಂಘ ವತಿಯಿಂದ ಆಯೋಜಿಸಿದ್ದ ಓಬವ್ವ ಸ್ವಯಂ ಆತ್ಮ ರಕ್ಷಣೆ ಕೌಶಲ್ಯ ತರಬೇತಿಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜನಕೆ ಒಬವ್ವ ಹಾಗೂ ಮಹಾನೀಯರ ಭಾವಚಿತ್ರಗಳಿಗೆ ಗಣ್ಯರಿಂದ ಪುಷ್ಪನಮನ ಸಲ್ಲಿಸಲಾಯಿತು. ನಂತರ ಕಾರ್ಯಕ್ರಮವನ್ನು ಉಧ್ಘಾಟಿಸಿ ಶಾಲಾ ಹೆಣ್ಣುಮಕ್ಕಳಿಂದ ಕರಾಟೆ ಪ್ರದರ್ಶನ ನಡೆಯಿತು. ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರಲ್ಲದೆ, ಸಮಸ್ಯೆಗಳು ಎದುರಾದಾಗ, ಕುಗ್ಗದೆ, ಶಾಂತಚಿತ್ತ ಮನೋಭಾವ ಹಾಗೂ ಆತ್ಮಸ್ಥೈರ್ಯದಿಂದ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು. 

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕೆಲವು ಕಿಡಿಗೇಡಿಗಳಿಂದಾಗಿ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಗಂಡು-ಹೆಣ್ಣು ಎಂಬ ಬೇಧ-ಭಾವವಿಲ್ಲದೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರ್ಕಾರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ, ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗೆ ವಿನೂತನವಾಗಿ ಜಾರಿಗೊಳಿಸಿರುವ ಓಬವ್ವ ಸ್ವಯಂ ಆತ್ಮ ರಕ್ಷಣೆ, ಕಲೆ, ಕೌಶಲ್ಯಗಳ ತರಬೇತಿ ಕಾರ್ಯಕ್ರಮವು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಧೈರ್ಯವನ್ನು ಬೆಳೆಸಿಕೊಳ್ಳಲು ಇಂತಹ ಕೌಶಲ್ಯ ತರಬೇತಿಗಳು ನೆರವಾಗಲಿದ್ದು, ಯೋಗ, ವ್ಯಾಯಾಮ ,ಕರಾಟೆಯನ್ನು ಪ್ರತಿದಿನದ ಜೀವನದಲ್ಲಿ ರೂಢಿಸಿಕೊಂಡು ಅಭ್ಯಾಸ ಮಾಡುವುದರಿಂದ ಆತ್ಮಸ್ಥೈರ್ಯದೊಂದಿಗೆ ಸವಾಲುಗಳನ್ನು ಎದುರಿಸಿ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ ಎಂದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯಗಳು, ಕಿರುಕುಳಗಳು ನಡೆಯುತ್ತಿದ್ದು, ಇವುಗಳನ್ನು ತಡೆಯುವಲ್ಲಿ ಮತ್ತು ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಓಬವ್ವ ಕೌಶಲ್ಯ ರಕ್ಷಣಾ ತರಬೇತಿಯು ಉಪಯುಕ್ತವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿ ಕರಾಟೆಗಾಗಿ ಖಾಯಂ ನೌಕರರು ಇಲ್ಲ. ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸಲು ಸರಕಾರ ವಿನೂತನ ರೀತಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸ್ವಯಂ ಆತ್ಮ ರಕ್ಷಣೆ ಕಲೆಯನ್ನು ಪ್ರಸ್ತುತಪಡಿಸಿದರು. ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿನಯ್‌ಕುಮಾರ್.ಎಸ್.ಎಂ., ಜಿಪಂ ಸಿಇಒ ಕೆ.ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಭವ್ಯ.ಕೆ.ಆರ್. ಕರಾಟೆ ತರಬೇತುದಾರ ಸನ್‌ಸೈ ಮುರಳಿ, ವಿಶ್ವನಾಥಪುರ ಗ್ರಾಪಂ ಸದಸ್ಯರುಗಳು, ತಾಲೂಕು ಮಟ್ಟದ ಅಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Be the first to comment

Leave a Reply

Your email address will not be published.


*