ಪದವಿ ವ್ಯಾಸಂಗ ನಾಲ್ಕು ವರ್ಷ ವಿಸ್ತರಿಣೆಯನ್ನು ರದ್ದುಪಡಿಸಲು ಸಿಪಿಐ(ಎಂ) ಆಗ್ರಹ : 

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಕಾರವಾರ: ಕರ್ನಾಟಕ ರಾಜ್ಯ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಭಾಗವಾಗಿ, ಪದವಿ ವ್ಯಾಸಂಗವನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಜಿಲ್ಲಾ ಸಮಿತಿಯು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದೆ.ಹಾಗೆಯೇ, ಮೂರು ವರ್ಷಗಳ ಪದವಿ ವ್ಯಾಸಂಗದ ಸಂದರ್ಭದಲ್ಲಿದ್ದ ನಾಲ್ಕು ಸೆಮಿಸ್ಟರ್‌ಗಳ ಕನ್ನಡ ಭಾಷಾ ವ್ಯಾಸಂಗವನ್ನು ಎರಡು ಸೆಮಿಸ್ಟರ್‌ಗಳಿಗೆ ಮೊಟಕುಗೊಳಿಸಲಾಗಿದೆ. ರಾಜ್ಯ ಸರಕಾರದ ಈ ಎರಡು ಕ್ರಮಗಳು ವಿದ್ಯಾರ್ಥಿ ಹಾಗೂ ಕನ್ನಡ ವಿರೋಧಿ ಮತ್ತು ರಾಜ್ಯದ ಅಭಿವೃದ್ದಿ ವಿರೋಧಿ ಕ್ರಮಗಳಾಗಿವೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ. ತಕ್ಷಣವೇ ಆ ಎರಡು ಜನ ವಿರೋಧಿ ಕ್ರಮಗಳನ್ನು ವಾಪಾಸು ಪಡೆಯುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಂತಾರಾಮ ನಾಯಕ ಅವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ʻʻಪದವಿ ವ್ಯಾಸಂಗವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದು ಕೇವಲ  ಮೂರು ವರ್ಷಗಳಲ್ಲೆ ಪದವಿ ವ್ಯಾಸಂಗ ಮುಗಿಸಿ, ನಿರುದ್ಯೋಗ ಸೈನ್ಯ ಸೇರುವವರನ್ನು ಕನಿಷ್ಠ ಒಂದು ವರ್ಷ ನಿಯಂತ್ರಿಸುವ ದುಷ್ಟ ಯೋಚನೆಯಾಗಿದೆ ಮತ್ತು ವಿದ್ಯಾರ್ಥಿ ಹಾಗೂ ಆತನ ಪೋಷಕರು ಮತ್ತೊಂದು ವರ್ಷದ ವ್ಯಾಸಂಗಕ್ಕೆ ದುಬಾರಿ ಶುಲ್ಕ ಮತ್ತಿತರೇ ವೆಚ್ಚ ಭರಿಸುವ ಹೊರೆಯನ್ನು ಹೇರುವ ಮತ್ತು ಆ ಮೂಲಕ ಖಾಸಗೀ ಶಿಕ್ಷಣ ಸಂಸ್ಥೆಗಳ ಲೂಟಿಯ ಹರಿವನ್ನು ವಿಸ್ತರಿಸುವ ಸಂಚಾಗಿದೆʼʼ ಎಂದು ತಿಳಿಸಿದ್ದಾರೆ.ಅದೇ ರೀತಿ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಕಲಿಯುವ ಅವಕಾಶವನ್ನು ನಾಲ್ಕು ಸೆಮಿಸ್ಟರ್ ಗಳ ಅವಧಿಗಳಿಂದ ಎರಡು ಸೆಮಿಸ್ಟರ್ ಗಳ ಅವಧಿಗೆ ಮೊಟಕು ಮಾಡಿರುವುದು ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಕಲಿಕೆಯನ್ನು ಮೊಟಕು ಮಾಡುವ ಮತ್ತು ಆ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವನ್ನು ಮೊಟಕು ಮಾಡಿದಂತಾಗಿದೆ. ಆ ಮೂಲಕ ಅದು ಕನ್ನಡ ವಿರೋಧಿಯಾಗಿದೆ ಎಂದು ಸಿಪಿಐ(ಎಂ) ಅರೋಪಿಸಿದೆ.ಆದ್ದರಿಂದ, ಈ ಎರಡು ಜನವಿರೋಧಿ ಕ್ರಮಗಳನ್ನು ರಾಜ್ಯ ಸರಕಾರ ಕೂಡಲೇ ವಾಪಾಸು ಪಡೆದು ಈ ಹಿಂದಿನಂತೆ ಮುಂದುವರೆಸಲು ರಾಜ್ಯ ಸರಕಾರವನ್ನು ಸಿಪಿಐ(ಎಂ) ಒತ್ತಾಯಿಸುತ್ತದೆ ಎಂದು ಸಿಪಿಐ(ಎಂ) ಉತ್ತರಕನ್ನಡ ಜಿಲ್ಲಾ ಕಾರ್ಯದರ್ಶಿ ಶಾಂತರಾಮ ನಾಯಕ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*