ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರ ಪ್ರಾರಂಭ – ಸರಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವಾಗಬೇಕು

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ಸರಕಾರದ ಯೋಜನೆಗಳು ತಳಮಟ್ಟದ ಜನರಿಗೆ ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲವೆಂದು ಅರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನ ಸಿಎಸ್‌ಸಿ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ತಿಳಿಸಿದರು.

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿರುವ ವಿಎಸ್‌ಎಸ್‌ಎನ್ ಕಟ್ಟಡದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ನೂತನವಾಗಿ ಪ್ರಾರಂಭಿಸಿರುವ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಹಲವಾರು ಬಡ ಜನರಿಗೆ ಅನುಕೂಲವಾಗಲೆಂದು ಸರಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ದೂರದಾಲೋಚನೆಯಿಂದಾಗಿ ರಾಜ್ಯದ ಹಲವಾರು ಕಡೆಗಳಲ್ಲಿ ಸುಮಾರು ೬ ಸಾವಿರಕ್ಕೂ ಹೆಚ್ಚು ಸಿಎಸ್‌ಸಿ ಡಿಜಿಟಲ್ ಕೇಂದ್ರಗಳನ್ನು ಈಗಾಗಲೇ ತೆರೆಯುವುದರ ಮೂಲಕ ಜನರ ಸೇವೆಯನ್ನು ಮಾಡುತ್ತಿದೆ. ದೇವನಹಳ್ಳಿ ತಾಲೂಕಿನಲ್ಲಿ ೩೪ ಕೇಂದ್ರಗಳನ್ನು ಮಾಡಲಾಗಿದೆ. ಪ್ರತಿ ದಿನ ಈ ಕೇಂದ್ರಗಳು ತೆರೆದಿದ್ದು, ಪ್ರಸ್ತುತ ಇ-ಶ್ರಮ್ ಕಾರ್ಡು ವಿತರಣಾ ಕಾರ್‍ಯ ಮಾಡಲಾಗುತ್ತಿದೆ. ಅದಕ್ಕೆ ಬೇಕಾದ ಪರಿಕರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಒದಗಿಸಿಕೊಟ್ಟಿದೆ. ಈ ಕಾರ್ಯಕ್ರಮ ಈ ಭಾಗದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ವಿಶ್ವನಾಥಪುರ ಗ್ರಾಪಂ ಉಪಾಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸೇವಾಭಿವೃದ್ಧಿ ಸಂಸ್ಥೆ ಹಲವಾರು ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಸಾರ್ವಜನಿಕ ಸಂಪರ್ಕ ಕೇಂದ್ರ ತೆರೆದಿರುವುದು ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಸರಕಾರದ ಸೌಲಭ್ಯ ಪಡೆಯಲು ದೂರದ ತಾಲೂಕು ಕಚೇರಿ, ನಾಡಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಇದರಿಂದ ಮುಕ್ತಿಯಾಗುವಂತೆ ತೀರ ಹತ್ತಿರದಲ್ಲಿ ಗ್ರಾಪಂ ಪಕ್ಕದಲ್ಲಿಯೇ ಇಂತಹ ಸಂಸ್ಥೆಯು ಕೇಂದ್ರವನ್ನು ಸ್ಥಾಪಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವನಾಥಪುರ ಗ್ರಾಮದ ಅರ್ಹ ಜನರಿಗೆ ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ ನೇತೃತ್ವದಲ್ಲಿ ಇ-ಶ್ರಮ್ ಕಾರ್ಡು ವಿತರಿಸಲಾಯಿತು. ಈ ವೇಳೆ ಗ್ರಾಪಂ ಅಧ್ಯಕ್ಷೆ ಮಂಗಳ, ಉಪಾಧ್ಯಕ್ಷ ವಿನಯ್‌ಕುಮಾರ್, ಪಿಡಿಒ ಗಂಗರಾಜು, ಕಾರ್ಯದರ್ಶಿ ಪದ್ಮಮ್ಮ, ವಿಎಸ್‌ಎಸ್‌ಎನ್‌ನ ಕಾರ್ಯದರ್ಶಿ ಕೃಷ್ಣಮೂರ್ತಿ, ಕಸಾಪ ತಾಲೂಕು ಮಾಜಿ ಉಪಾಧ್ಯಕ್ಷ ರಾಮಾಂಜಿನಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿ ನರಸಿಂಹರಾಜು, ವಲಯ ಮೇಲ್ವಿಚಾರಕ ಧನಂಜಯ್, ಸಿಬ್ಬಂದಿ, ಗ್ರಾಮದ ಮುಖಂಡ ನಾರಾಯಣಸ್ವಾಮಿ, ಮಹಿಳೆಯರು, ಗ್ರಾಮಸ್ಥರು ಇದ್ದರು.

 

Be the first to comment

Leave a Reply

Your email address will not be published.


*