ಜಿಲ್ಲಾ ಸುದ್ದಿಗಳು
ಯಲ್ಲಾಪುರ
ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಬಯಸಿದ ಅಧಿಕಾರಿಯ ಮನಃಪರಿವರ್ತನೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬರು ಜನರಿಂದ ಭಿಕ್ಷೆ ಬೇಡಿ ಹಣ ನೀಡಲು ಮುಂದಾದ ಘಟನೆ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದಿದೆ.ತಟಗಾರ ಗ್ರಾಮದ ಸರ್ವೆ ನಂ 12ರಲ್ಲಿನ ಕ್ಷೇತ್ರವನ್ನು ಉಪ ನೋಂದಣಾಧಿಕಾರಿ ಕಚೇರಿ ಮೂಲಕ ಗಜಾನನ ಭಟ್ಟ ಹಾಗೂ ನಾರಾಯಣ ಭಟ್ಟ ಎಂಬ ಸಹೋದರರಿಬ್ಬರು ವಿಭಾಗ ಮಾಡಿಕೊಂಡಿದ್ದರು. ಇದನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು 2 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಹೀಗಾಗಿ ಗಜಾನನ ಭಟ್ಟ ಅವರ ಪುತ್ರ ಅಚ್ಯುತಕುಮಾರ ಎಂಬಾತನು ಮಂಗಳವಾರ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಅಧಿಕಾರಿಗೆ ಅವರು ಬಯಸಿದ ಹಣ ನೀಡಲು ಮುಂದಾದರು.
ಭ್ರಷ್ಟಾಚಾರದ ಕುರಿತು ಹೋರಾಟ ಮಾಡುವುದಕ್ಕಿಂತ ಮೊದಲು ಅಧಿಕಾರಿಗಳ ಮನ ಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ ಎಂದು ಅಚ್ಯುತಕುಮಾರ ಈ ವೇಳೆ ತಿಳಿಸಿದರು. ಅಚ್ಯುತಕುಮಾರ ಅವರು ಸರ್ಕಾರಿ ಕಚೇರಿಗಳಲ್ಲಿ ಸಿ.ಸಿ ಟಿವಿ ಕಡ್ಡಾಯ ಮಾಡಬೇಕು ಎಂದು ಮೂರು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾಡಳಿತ ಆ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಎಲ್ಲಾ ಕಚೇರಿಗಳಲ್ಲಿ ಆ ಆದೇಶ ಇನ್ನೂ ಅನುಷ್ಠಾನ ಆಗಿಲ್ಲ. ಈ ಆದೇಶದ ಅನ್ವಯ ಯಲ್ಲಾಪುರದ ತಹಶೀಲ್ದಾರ್ ಕಚೇರಿಯ ಎಲ್ಲೆಡೆ ಸಿ.ಸಿ ಟಿವಿ ಅಳವಡಿಸುವಂತೆ ಅವರು ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರಿಗೆ ಮನವಿ ಮಾಡಿದರು. ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಮನವಿಗೆ ಪೂರಕವಾಗಿ ಸ್ಪಂದಿಸಿದರು.
ಭ್ರಷ್ಟಾಚಾರ ತಡೆಗೆ ಸರ್ಕಾರಿ ಕಚೇರಿಯ ಎಲ್ಲಡೆ ಸಿ.ಸಿ ಟಿವಿ ಕಡ್ಡಾಯ ಆಗಬೇಕು. ಈ ಕುರಿತು ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಪಾಲನೆಯಾಗಿಲ್ಲ. ಪ್ರಸ್ತುತ ಜನರಿಂದ ಸ್ವೀಕೃತವಾದ 136 ರೂ. ಅನ್ನು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಕೃತಿ ವಿಕೋಪ ನಿಧಿಗೆ ನೀಡಲಾಗುವುದು. – ಅಚ್ಯುತಕುಮಾರ
Be the first to comment