ಜಿಲ್ಲಾ ಸುದ್ದಿಗಳು
ಕುಮಟಾ
ವಿಜಯ ಕರ್ನಾಟಕ ಪತ್ರಿಕೆಯ ಕುಮಟಾ ವರದಿಗಾರ ಅನ್ಸಾರ ಶೇಖ್ ಅವರಿಗೆ ಅಪಘಾತ ಪಡಿಸಲು ಯತ್ನಿಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕುಮಟಾ ತಾಲೂಕಿನ ಪತ್ರಕರ್ತರು ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.ತಾಲೂಕಿನ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಅನ್ಸಾರ ಶೇಖ್ ಅವರು ಡಿ.೩೧ರಂದು ತಮ್ಮ ಸ್ಕೂಟಿ ಮೇಲೆ ಚಂದಾವರದಿಂದ ಕುಮಟಾ ಕಡೆಗೆ ಸಾಗುತ್ತಿರುವಾಗ ಫಾರ್ಚೂನರ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಚಂದಾವರದ ಇಮಾಮ್ ಜೈನೊದ್ದಿನ್ ಘನಿ ಎಂಬಾತ ವಾಲಗಳ್ಳಿ ಘಟ್ಟದ ಬಳಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಅಪಘಾತ ಪಡಿಸಲು ಯತ್ನಿಸಿದ್ದಾನೆ. ಸ್ಕೂಟರ್‌ನ ಹಿಂಬದಿಯಿಂದ ವೇಗವಾಗಿ ಬಂದು ಅಪಘಾತ ಪಡಿಸಿ ಕೊಲೆ ಮಾಡುವ ಭಯ ಹುಟ್ಟಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿತನ ವಿರುದ್ಧ ಈಗಾಗಲೇ ಪತ್ರಕರ್ತ ಅನ್ಸಾರ ಶೇಖ್ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಅಲ್ಲದೇ ಆರೋಪಿತನು ಕ್ರಿಮಿನಲ್ ಮನಸ್ಥಿತಿಯಲ್ಲಿದ್ದು, ೨೦೧೭ರಲ್ಲಿ ಅನ್ಸಾರ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಸಂಬಂಧ ಹೊನ್ನಾವರ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ.
ಆರೋಪಿತನ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲೂ ಕೂಡ ಡಿ.೨೯ರಂದು ಕೊಲೆ ಬೆದರಿಕೆ ಹಾಕಿದ ಬಗ್ಗೆ ಇನ್ನೊಂದು ಪ್ರಕರಣ ಕೂಡ ದಾಖಲಾಗಿದೆ. ಅಪರಾಧಿಕ ಮನಸ್ಥಿತಿಯಲ್ಲಿರುವ ಆರೋಪಿತನಿಂದ ಅನ್ಸಾರ್ ಅವರ ಜೀವಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇಂಥ ದುಷ್ಕೃತ್ಯದಿಂದ ಪತ್ರಕರ್ತರಿಗೆ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ಆರೋಪಿತ ಇಮಾಮ್ ಜೈನೊದ್ದಿನ್ ಘನಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪತ್ರಕರ್ತರು ನೀಡಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಅವರು, ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ಪತ್ರಕರ್ತರಿಗೆ ಭರವಸೆ ನೀಡಿದರು.
ಬಳಿಕ ಪತ್ರಕರ್ತರು ಕುಮಟಾ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಗ್ರೇಡ್ -೨ ತಹಸೀಲ್ದಾರ್ ಅಶೋಕ ಭಟ್ ಅವರ ಮೂಲಕ ಉಪವಿಭಾಗಾಧಿಕಾರಿ ರಾಹುಲ ರತ್ನಂ ಪಾಂಡೆ ಅವರಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಕೆಯಲ್ಲಿ ಕುಮಟಾ ತಾಲೂಕಿನ ಪತ್ರಕರ್ತರಾದ ಸುಬ್ರಾಯ ಭಟ್, ಎಂ ಜಿ ನಾಯ್ಕ, ಚರಣರಾಜ್ ನಾಯ್ಕ, ರಾಘವೇಂದ್ರ ದಿವಾಕರ, ಪ್ರವೀಣ ಹೆಗಡೆ, ಎಸ್ ಎಸ್ ಹೆಗಡೆ, ಮಂಜುನಾಥ ಇರಗೊಪ್ಪ, ನಾಗರಾಜ ಪಟಗಾರ, ನಟರಾಜ ಗದ್ದೆಮನೆ, ವಿನಾಯಕ ಬ್ರಹ್ಮೂರ, ಶಂಕರ ಶರ್ಮ, ಸಂತೋಷ ನಾಯ್ಕ ಇತರರು ಇದ್ದರು.
Be the first to comment