ರಾಜ್ಯ ಸುದ್ದಿಗಳು
ಉಡುಪಿ
ಸೋಮವಾರ ರಾತ್ರಿ ಕೋಟತಟ್ಟು ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮಕ್ಕೆ ನುಗ್ಗಿ ಕೊರಗ ಸಮುದಾಯದವರ ಮೇಲೆ ಮನಸ್ಸೋಇಚ್ಚೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪಿಎಸ್ಐ ಸಂತೋಷ್ ಬಿ.ಪಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.ಈ ಬಗ್ಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಮಾಹಿತಿ ನೀಡಿದ್ದು, ಕೋಟದಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧಾರದಲ್ಲಿ ಕೋಟ ಪಿಎಸ್ಐ ಅವರನ್ನು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಯವರು ಅಮಾನತು ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿನ ಐದು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಕೋಟ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ ಎಂದರು.
ಘಟನೆ ಹಿನ್ನೆಲೆ: ಉಡುಪಿ ಜಿಲ್ಲೆ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಡಿ.27 ಸೋಮವಾರ ರಾತ್ರಿ ರಾಜೇಶ್ ಎನ್ನುವರ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿತ್ತು. ಕಾಲನಿಯಲ್ಲಿನ ಸಮುದಾಯದವರು ಮತ್ತು ಗೆಳೆಯರು ಆಮಂತ್ರಿತರಾಗಿದ್ದು ಎಲ್ಲರೂ ಈ ಮೆಹೆಂದಿ ಶಾಸ್ತ್ರಕ್ಕೆ ಬಂದಿದ್ದರು. ಡಿಜೆ ವ್ಯವಸ್ಥೆಯೂ ಇದ್ದು ರಾತ್ರಿ 9.30ರಿಂದ ಊಟ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಯ ಬಳಿಕ ಪೊಲೀಸ್ 112 ವಾಹನ ಆಗಮಿಸಿ ಡಿಜೆ ಶಬ್ಧ ತೆಗೆಯುವಂತೆ ಸೂಚಿಸಿದ್ದು ಕೆಲವೇ ಕ್ಷಣಗಳಲ್ಲಿ ಬಂದ ಕೋಟ ಪಿಎಸ್ಐ ಸಂತೋಷ್ ಬಿ.ಪಿ ಹಾಗೂ ಇತರ ಕೆಲ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೇ ವಿಚಾರ ಕೇಳಲು ಬಂದ ಕೊರಗ ಸಮುದಾಯದ ಮುಖಂಡ ಗಣೇಶ್ ಬಾರ್ಕೂರು ಅವರ ಕಾಲರ್ ಪಟ್ಟಿ ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಅವರೊಂದಿಗೆ ಮದುಮಗನ ಅಣ್ಣ ಗಿರೀಶ್, ಸುದರ್ಶನ ಹಾಗೂ ಸಚಿನ್ ಎನ್ನುವರನ್ನು ಕೂಡ ಠಾಣೆಗೆ ಕರೆದೊಯ್ದು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿತ್ತು. ಘಟನೆಯಲ್ಲಿ ಮದುಮಗ ರಾಜೇಶ್, ಗಣೇಶ್ ಕೊರಗ, ಸುಂದರಿ, ಲಕ್ಷ್ಮೀ, ಬೇಬಿ, 12 ವರ್ಷ ಪ್ರಾಯದ ಬಾಲಕಿ, ಮದುಮಗನ ತಾಯಿ ಗಿರಿಜಾ, ಪ್ರವೀಣ್, ಶೇಖರ್ ಮೊದಲಾದವರಿಗೆ ಕೈ, ಕಾಲು, ತಲೆ, ಕುತ್ತಿಗೆ ಮೊದಲಾದೆಡೆ ಗಾಯಗಳಾಗಿತ್ತು.ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮನೆಗೆ ಭೇಟಿ ನೀಡಿ ನೊಂದವರಿಗೆ ಧೈರ್ಯ ಹೇಳಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
Be the first to comment