ಕಸದವರು ಅಲ್ಲ ಕಸ ಸ್ವಚ್ಛಗೊಳಿಸುವವರು…! ಪೌರಕಾರ್ಮಿಕರಿಗೊಂದು ಸಲಾಂ….!!!

ವರದಿ: ಸ್ಪೂರ್ತಿ ಎನ್ ಶೇಟ್

ಅಂಬಿಗ್ ನ್ಯೂಸ್ ವಿಶೇಷ

CHETAN KENDULI

ಶಿರಶಿ(ಹುಲೇಕಲ್):

ಪೌರಕಾರ್ಮಿಕರ ಕೆಲಸ ಅಷ್ಟು ಸುಲಭವಾದುದಲ್ಲ. ಪ್ರತಿನಿತ್ಯ ಸಮಾಜ ಏಳುವ ಮೊದಲು ಅವರ ಕೆಲಸ ಪ್ರಾರಂಭವಾಗುತ್ತದೆ . ತಮಗೆ ತಿಳಿಸಿದ ಸುರಕ್ಷಿತವಲ್ಲದ ಅದೆಷ್ಟೋ ಪ್ರದೇಶಗಳಿಗೆ ತೆರಳಿ ಕೆಲಸ ಮಾಡಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮನೆಮನೆಗೆ ತೆರಳಿ ಒಣ ಕಸ ಹಸಿ ಕಸ ಎಂದು ಬೇರೆ ಬೇರೆ ಮಾಡಿ ಸಂಗ್ರಹಿಸಿಕೊಳ್ಳಬೇಕು. ದುರ್ವಾಸನೆ ಬೀರುವ ಮಲಮೂತ್ರ ಕೊಳೆತ ವಸ್ತುಗಳನ್ನು ನಾವು ನೋಡಲು ಸಹ ಇಷ್ಟಪಡುವುದಿಲ್ಲ. ಆದರೆ ಪೌರಕಾರ್ಮಿಕರು ಅವುಗಳನ್ನು ಪ್ರತಿನಿತ್ಯ ವಿಲೇವಾರಿ ಮಾಡಬೇಕು. ರಸ್ತೆಗಳನ್ನು ಸದಾ ಸ್ವಚ್ಛವಾಗಿಡಬೇಕು. ವಿಪರ್ಯಾಸವೆಂದರೆ ಇನ್ನೂ ಸಹ ಮ್ಯಾನ್ ಹೋಲ್ ಗೆ ಇಳಿದು ಕೆಲಸ ಮಾಡುವವರಿದ್ದಾರೆ. ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ನಮ್ಮ ಸುತ್ತಮುತ್ತಲಿನ ಪ್ರದೇಶ ಸದಾ ಸ್ವಚ್ಛವಾಗಿ ಸುಂದರವಾಗಿರಬೇಕು ಎಂದು ಎಲ್ಲರೂ ಇಚ್ಛೆ ಪಡುತ್ತೇವೆ . ಆದರೆ ಅದೇ ಪ್ರದೇಶದಲ್ಲಿ ಕಸವನ್ನು ಹಾಕುವವರು ಯಾರು ? ನಾವುಗಳೇ ತಾನೇ ? ಕಸ ತೆಗೆದುಕೊಂಡು ಹೋಗಲು ಮನೆಗೆ ಬರುವ ಪೌರಕಾರ್ಮಿಕರನ್ನು ನಾವು ಕಸದವರು, ಕಸ ಬನ್ನಿ ಇಲ್ಲಿ, ಎಂದು ಸಂಬೋಧಿಸುತ್ತೆವೆ. ನಿಜಾರ್ಥದಲ್ಲಿ ಯಾರು ಕಸದವರು ? ಬಳಸಿದ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಬಿಸಾಡುವ ನಾವುಗಳೂ ಅಥವಾ ನಾವುಗಳು ಬಿಸಾಡಿದ ಕಸವನ್ನು ಗುಡಿಸಿ ಸ್ವಚ್ಛಗೊಳಿಸುವ ಅವರೊ. ಸರಕಾರಕ್ಕೆ ತೆರಿಗೆ ಕಟ್ಟುತ್ತೇವೆ. ಅದರಿಂದ ಅವರಿಗೆ ಸಂಬಳ ಬರುತ್ತದೆ. ಕಸ ತೆಗೆಯುವುದು ಅವರ ಆದ್ಯ ಕರ್ತವ್ಯ ಎಂದು ಹೇಳುವ ಆಷಾಢಭೂತಿಗಳು ನಾವು. ಮತ ನೀಡಿ ಆಯ್ಕೆಮಾಡಿದ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಲು ಹಿಂಜರಿಯುತ್ತೇವೆ. ಅದೆಷ್ಟೋ ಬಾರಿ ನಮ್ಮ ನಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿಫಲರಾಗುತ್ತೇವೆ.

 

ಸುರಕ್ಷತೆಗೆ, ಕೈಗವಸು ಇಲ್ಲದೆ, ಪ್ಲಾಸ್ಟಿಕ್ ಕಾಲುಚೀಲಗಳಿಲ್ಲದೆ, ಬೂಟುಗಳಿಲ್ಲದೆ ಅದೆಷ್ಟೋ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆ ಬರಲಿ ಬಿಸಿಲೇ ಇರಲಿ ಅವರ ಕೆಲಸ ಸತತವಾದದ್ದು. ಎರಡು ದಿನ ಅವರು ನಮ್ಮಗಳ ಮನೆಯಿಂದ ಕಸವನ್ನು ತೆಗೆದುಕೊಂಡು ಹೋಗದಿದ್ದರೆ ನಮ್ಮ ಮನೆಯೇ ನಮಗೆ ಇರಿಸುಮುರಿಸು ತರುವ ವಾತಾವರಣವನ್ನು ಸೃಷ್ಟಿಸುತ್ತದೆ. ಇನ್ನು ಊಹಿಸಿ ಅವರೇನಾದರೂ ಇಲ್ಲವೆಂದರೆ ನಮ್ಮ ಸಮಾಜ ಯಾವ ರೀತಿ ಇರಬಹುದು ಎಂದು. ಎಲ್ಲಿಯೇ ಕಸ ಕಂಡರು ಅದಕ್ಕೆ ಹೊಣೆಗಾರರು ಕಸಗುಡಿಸುವವರು ಎಂಬ ಮನೋಭಾವ ನಮ್ಮಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ­ಯವರು ಸ್ವತಃ ಪೊರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛ ಭಾರತ ಅಭಿಯಾನ­ಕ್ಕೆ ಚಾಲನೆ ನೀಡಿದರು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಜನ ಸಹ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಇದೇ ಕಾರ್ಯವನ್ನು ಪ್ರತಿನಿತ್ಯ ಮಾಡುವ ಸಫಾಯಿ ಕರ್ಮಚಾರಿಗಳನ್ನು ನೋಡುವ ದೃಷ್ಟಿ ಮಾತ್ರ ಬದಲಾಗಿಲ್ಲ ಎನ್ನುವುದು ನೋವಿನ ಸಂಗತಿ. ಕೊರೋನಾ ಎಂಬ ಮಹಾಮಾರಿಯ ವಿರುದ್ಧ ದೇಶವೇ ಹೋರಾಡುತ್ತಿರುವಾಗ ಕೊರೋನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದವರು ಪೌರಕಾರ್ಮಿಕರು. ಅವರ ಸೇವಾಕಾರ್ಯಗಳಿಗೆ ನಾವು ಬಳಸುವ ಪದಗಳು ಅವರ ಮನಸ್ಸನ್ನು ಘಾಸಿ ಮಾಡಬಾರದು. ಕಸವನ್ನು ಬಿಸಾಡುವವರು ಕಸದವರು. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪೌರಕಾರ್ಮಿಕರಲ್ಲ.

ಲೇಖನ ಸಹಾಯ ಸಹಕಾರ: ಪರಮ ಕಿತ್ಲಿ

Be the first to comment

Leave a Reply

Your email address will not be published.


*