ರಾಜ್ಯ ಸುದ್ದಿಗಳು
ದೇವನಹಳ್ಳಿ
ನಮ್ಮ ಪೂರ್ವಜರು ಊರಿನ ಒಳಿತಿಗಾಗಿ ಕೆರೆಗಳನ್ನು ಕಟ್ಟಿಸಿ, ಕಾಪಾಡಿಕೊಂಡು ಬರುತ್ತಿದ್ದರು. ಇದು ಇಡೀ ಜೀವ ಸಂಕುಲಕ್ಕೆ ಜೀವನಾಧಾರವಾಗಿರುತ್ತಿತ್ತು. ನಮ್ಮ ಪೂರ್ವಜರಿಗೆ ಪ್ರಕೃತಿಯೊಂದಿಗೆ ನಿಕಟವಾದ ಸಂಪರ್ಕ ಇತ್ತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಮತ್ತು ಹೇಮಾವತಿ.ವಿ.ಹೆಗ್ಗಡೆಯವರ ಸುಪುತ್ರಿ ಶ್ರದ್ಧಾ ಅಮೀತ್ ಹೇಳಿದರು. ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವನಾಥಪುರ ಕೆರೆ ಬಾಗಿನ ಅರ್ಪಣೆ ಮತ್ತು ನಾಮಫಲಕ ಅನಾವರಣ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆರೆಗಳ ಸಂರಕ್ಷಣಾ ಕಾರ್ಯಕ್ರಮ ಒಂದು ಸಂತೃಪ್ತಿಕೊಡುವಂತಹ ಕಾರ್ಯಕ್ರಮವಾಗಿದೆ. ಜೀವ ಸಂಕುಲ ಉಳಿವಿಗೆ ಕೆರೆಗಳ ಪಾತ್ರ ಹೆಚ್ಚು ಇರುತ್ತದೆ. ಆನಾದಿ ಕಾಲದಲ್ಲಿ ಕೆರೆಗಳು ಇದ್ದವು. ಕಾಲಕಳೆದಂತೆ ಕೆರೆಗಳು ನಶಿಸುವ ಹಂತ ತಲುಪಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆ ಮತ್ತು ಗ್ರಾಪಂ, ಗ್ರಾಮದ ಮುಖಂಡರು, ಗ್ರಾಮಸ್ಥರ ಸಹಕಾರದಲ್ಲಿ ಮತ್ತೇ ಕೆರೆಗಳಿಗೆ ಮರುಜೀವ ತುಂಬುವ ಕೆಲಸವಾಗಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.
ಸಂತಸವನ್ನು ಹಂಚಿಕೊಂಡ ಸಂದರ್ಭ: ಕೆರೆಗಳು ನೀರಿನಿಂದ ಕಂಗೊಳಿಸುತ್ತಿರುವುದರಿಂದ ಮನುಷ್ಯನ ಜೊತೆಯಲ್ಲಿ ಪ್ರಾಣಿ- ಕಲರವೂ ಸಹ ಮೊಳಗುತ್ತಿದೆ. ಇದನ್ನು ನೋಡಲು ಸಂತೋಷವಾಗುತ್ತಿದೆ. ಎಲ್ಲರ ಮುಖದಲ್ಲಿ ಈ ದಿನ ಉತ್ತಮ ವಾತಾವರಣದಿಂದಾಗಿ ಸಂತೋಷ ಮುಗುಳ್ನಗೆ ಕಾಣಿಸುತ್ತಿದೆ ಎಂದು ವೇದಿಕೆಯಲ್ಲಿ ಸಂತಸವನ್ನು ಹಂಚಿಕೊಂಡರು. ಪೂರ್ವಜರಿಗೆ ಋತುಚಕ್ರದ ಬಗ್ಗೆ ಅರಿವಿತ್ತು: ನಮ್ಮ ಪೂರ್ವಜರು ಸೂರ್ಯೋದಯವಾದಾಗ ಎದ್ದೇಳುತ್ತಿದ್ದೇವು. ಸೂರ್ಯಸ್ತವಾದಾಗ ಮಲಗುತ್ತಿದ್ದೇವು. ಋತು ಚಕ್ರದ ಬಗ್ಗೆ ಅರಿವಿತ್ತು. ಯಾವಾಗ ಕಾಲ ಬದಲಾವಣೆಯಾಗುತ್ತದೆ. ಯಾವ ಸಮಯದಲ್ಲಿ ಕೃಷಿ ಚಟುವಟಿಕೆ ನಡೆಸಬೇಕು. ಯಾವ ಕಾಲದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಬೇಕು. ನಮ್ಮ ಋತುಗಳಿಗೆ ಸರಿಯಾಗಿ ನಡೆದುಕೊಂಡು ಬರಲಾಗುತ್ತಿತ್ತು. ನಮ್ಮ ದೇವರುಗಳೆಲ್ಲಾ ಗುಡ್ಡಗಾಡು, ಬೆಟ್ಟ-ಗುಟ್ಟ, ನದಿ, ಗಿಡ, ಮರಗಳಿಂದಲೇ ಬಂದಿರುವಂತಹವರು. ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ದೇವರ ಆಶೀರ್ವಾದ ಕಾಣುವವರು. ಮಂತ್ರವನ್ನು ಹೇಳುವುದರ ಮೂಲಕ ನಮ್ಮ ಪೂರ್ವಜರಿಗೆ ದಿನಬೆಳಗಾಗುತ್ತಿತ್ತು. ಗಂಗೆ, ಯಮುನಾ ನದಿಗಳನ್ನು ಯಾರು ನೋಡಿದ್ದಾರೆ. ಆದರೆ ನಮ್ಮ ದೇಶದ ಎಲ್ಲಾ ನದಿಗಳಿಗೆ ಮಾತೃ ಸ್ವರೂಪವನ್ನು ಕೊಟ್ಟು ಬೆಳಿಗ್ಗೆ ಅವರನ್ನು ನೆನೆದು ನಂತರದ ದಿನಚರಿಯನ್ನು ಮಾಡುತ್ತಿದ್ದೆವು. ನಮ್ಮ ಹಿಂದಿನ ತಲೆಮಾರುಗಳಿಗೆ ಪ್ರಕೃತಿಯನ್ನು ಉಳಿಸಬೇಕು. ಬೆಳೆಸಬೇಕು ಎನ್ನುವ ಅರಿವಿತ್ತು. ಹಾಗಾಗೀ ಕೆರೆಕಟ್ಟೆ, ಕಾಲೂವೆಗಳನ್ನು ಮಾಡಿಸಿದ್ದರು. ಅದ್ದರಿಂದ ಪ್ರಕೃತಿ ಎನ್ನುವುದು ನಮ್ಮ ಪೂರ್ವಜನ್ಮದ ಫಲವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಅನಾಹುತಗಳು ಆಗುತ್ತಿರುವುದು ತಪ್ಪಿಸಬೇಕು. ಗ್ರಾಮಗಳಲ್ಲಿ ಕೆರೆ-ಕುಂಟೆಗಳಿಂದ ವಾತಾವರಣ ಸಮೃದ್ಧಿಯನ್ನು ಪಡೆಯುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವಸಹಾಯ ಗುಂಪಿನ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಕುಂಭಕಳಸ ಹೊತ್ತು, ಶಾಲಾ ಮಕ್ಕಳಿಂದ ವಾದ್ಯಗೋಷ್ಠಿಯ ಮೂಲಕ ಆತ್ಮಿಯವಾಗಿ ಸ್ವಾಗತಿಸಿದ್ದು ಗಮನಸೆಳೆಯಿತು. ಕೆರೆಯ ನಾಮಫಲಕವನ್ನು ಅನಾವರಣಗೊಳಿಸಿ ನಂತರ ಕೆರೆಗೆ ಸಾಮೂಹಿಕವಾಗಿ ಬಾಗಿನ ಅರ್ಪಣೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ವಿಕಲಚೇತನ ಫಲಾನುಭವಿಗೆ ಸೈಕಲ್, ಹಿರಿಯರಿಗೆ ಮಾಸಾಶನ, ಬಡವರಿಗೆ ಸಹಾಯಧನ ವಿತರಣೆ ಮಾಡಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಮತ್ತು ಹೇಮಾವತಿ.ವಿ.ಹೆಗ್ಗಡೆಯವರ ಮೊಮ್ಮಗಳಾದ ಮಾನ್ಯ, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳಾನಾರಾಯಣಸ್ವಾಮಿ, ಉಪಾಧ್ಯಕ್ಷ ವಿನಯ್‌ಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಶ್ರೀ ಕ್ಷೇ.ಧ.ಗ್ರಾ.ಯೋಜನನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ, ಜಿಲ್ಲಾ ನಿರ್ದೇಶಕ ಸತೀಶ್ ನಾಯ್ಕ್, ತಾಲೂಕು ಯೋಜನಾಧಿಕಾರಿ ಅಕ್ಷತಾರೈ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಶ್ರೀ ಮಂಜುನಾಥೇಶ್ವರ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ವಿ.ಎಂ.ನರಸಿಂಹರಾಜು, ಕೆರೆ ಸಮಿತಿ ಸದಸ್ಯರು, ಮತ್ತಿತರರು ಇದ್ದರು
Be the first to comment