ಜಿಲ್ಲಾ ಸುದ್ದಿಗಳು
ಮಾಸಾಂತ್ಯಕ್ಕೆ ಶಾಲಾ ಕಟ್ಟಡದ ಕಾಮಗಾರಿ ಮುಗಿಸಲು ತಾಕಿತು
15-ನೇ ಫೆಬ್ರವರಿ 2022 ರಂದು ಪ್ರಾಥಮಿಕ ಶಾಲೆಯ 155 ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಹಮ್ಮಿಕೊಂಡಿದ್ದು ,ರಾಜ್ಯ ವ್ಯಾಪಿ ಇದೊಂದು ಮಾದರಿ ಕಾರ್ಯಕ್ರಮವಾಗಲಿದೆ ಹಾಗಾಗಿ ಪ್ರಾಥಮಿಕ ಶಾಲೆಯ ನೂತನ ಎರಡು ಕೊಠಡಿಗಳ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಸೂಚಿಸಿದರು.
ಬಾಗಲಕೋಟೆ:ಇಳಕಲ್ಲ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
ಸರಕಾರದ ಹೊಸ ಯೋಜನೆ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯವ ಕೆಡಿಪಿ ಸಭೆಯಂತೆ ಗ್ರಾಮ ಮಟ್ಟದಲ್ಲೂ ಪ್ರಗತಿ ಪರಿಶೀಲನೆ ನಡೆಯಬೇಕು ಎಂಬ ಸರಕಾರ ಆದೇಶದಂತೆ ಕೆಲೂರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹೊಸ ಕಾರ್ಯಕ್ರಮದ ಮಾಹಿತಿ ನೀಡಿದರು. ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ಸದಸ್ಯರನ್ನೊಳಗೊಂಡಂತೆ ನಡೆಯುವ ಈ ಸಭೆಯು ಗ್ರಾಮದ ಪ್ರಗತಿಗೆ ಪೂರಕವಾಗಲಿದೆ ಎಂದು ಅವರು ನುಡಿದರು.
ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಮಾತಾನಾಡಿ ಇಂತಹ ಸಭೆಯು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯುವುದರಿಂದ ಗ್ರಾಮ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಅನುಕೂಲವಾಗಲಿದೆ. ಈ ಸಭೆಗೆ ಹೋಬಳಿ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಗ್ರಾಮದ ಅರ್ಹ ಫಲಾನುಭವಿಗಳಿಗೆ ಪ್ರತಿ ಇಲಾಖೆಯ ಯೋಜನೆ ತಲುಪುವಂತಾಗಬೇಕು ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಗ್ರಾಮ ಮಟ್ಟದ ತ್ರೈಮಾಸಿಕ ಕೆ ಡಿ ಪಿ ಸಭೆಗೆ ಅಧಿಕಾರಿಗಳು ಹಾಜರಾಗಿ ಮಾಹಿತಿಯನ್ನು ನೀಡಬೇಕು. ಈ ಸಭೆಗೆ ಗೈರು ಹಾಜರಾದ ಇಲಾಖೆಯವರಿಗೆ ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜುರಾಗುವಂತೆ ಪುಸ್ತಕದಲ್ಲಿ ನಮೂದಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವಂತಾಗಬೇಕು ಎಂದು ತಿಳಿಸಿದರು.
ಶಿಕ್ಷಣ ಇಲಾಖೆ:
ಕೆಲೂರ,ಕುಣಿಬೆಂಚಿ,ತಳ್ಳಿಕೇರಿ ಗ್ರಾಮದ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದು ಶಾಲಾ ಮಕ್ಕಳ ಪ್ರಗತಿ, ಅಕ್ಷರ ದಾಸೋಹ ಯೋಜನೆ,ಕುಡಿಯುವ ನೀರು, ಶಾಲೆಯಲ್ಲಿನ ಶಿಕ್ಷಕರ ಕೊರತೆ,ಶಾಲಾ ಕಾಂಪೌಂಡ್ ಮುಂತಾದ ವಿಷಯಗಳ ಬಗ್ಗೆ ಇಲಾಖೆಯ ಸಿ.ಆರ್.ಸಿ ಹಣಗಿಯವರು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ:
ಕೋವಿಡ್-ವ್ಯಾಕ್ಸಿನೇಷನ್ ಬಗ್ಗೆ ಮಾಹಿತಿ ನೀಡಿ, ಗ್ರಾಮದಲ್ಲಿ ಆರೋಗ್ಯ ನೈರ್ಮಲ್ಯ ಕಾಪಾಡುವ ಹಲವಾರು ಮಾಹಿತಿ ನೀಡಿದರು.ಕುಡಿಯುವ ನೀರಿನ ಪರೀಕ್ಷೆ ಮಾಡಿಸಿ ಗ್ರಾಮದಲ್ಲಿ ಮಲೇರಿಯಾ, ಡೆಂಗ್ಯು ಜ್ವರ ಹರಡದಂತೆ ಕ್ರಮ ವಹಿಸಲಾಗುವುದು ಎಂದರು.
ಕೃಷಿ ಇಲಾಖೆ:
ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಈಗಾಗಲೆ ಸಾಕಷ್ಟು ಕ್ರಮವಹಿಸಿದ್ದು,ಸ್ಪಿಂಕ್ಲರ್ ಪಡೆಯಲು,ರೈತರು ತರಭೇತಿ ಪಡೆಯಲು,ಬದು ನಿರ್ಮಾನ,ಕೃಷಿ ಹೊಂಡ ನಿರ್ಮಾಣ ಮಾಡಲು ಅರ್ಜಿ ಸಲ್ಲಿಸಲು ಮಾಹಿತಿ ನೀಡಲಾಯಿತು.ಈಗಾಗಲೆ ತೊಗರಿ ಬೆಳೆ ಪರಿಹಾರ ರೈತ ಫಲಾನುಭವಿಗಳ ಖಾತೆಗೆ ಜಮಾಆಗುತ್ತಿದೆ.ರೈತರು ಸರ್ಕಾರದ ಯೋಜನೆಗಳನ್ನು ಪಡೆಯಲು ಸ್ವಯಂ ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು ಸೂಕ್ತ ಎಂದು ಕೃಷಿ ಇಲಾಖೆಯ ಅಧಿಕಾರಿ ಜಾಧವ ಮಾಹಿತಿ ಹಂಚಿಕೊಂಡರು.
ಹೆಸ್ಕಾಂನಿಂದ ಬೆಳಕು ಯೋಜನೆ:
ಸರ್ಕಾರದಿಂದ ಬೆಳಕು ಎಂಬ ಹೊಸ ಯೋಜನೆ ಜಾರಿಯಾಗಿದ್ದು ಈ ಯೋಜನೆ ಇದುವರೆಗೂ ವಿದ್ಯುತ್ ಸೌಲಭ್ಯ ಪಡೆಯದೆ ಇರುವ ಬಡವರ ಮನೆಗೆ ಹೆಸ್ಕಾಂನಿಂದ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.ಆದರೆ ಫಲಾನುಭವಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಬೇಕು. ಈಗಾಗಲೆ ಕೆಲೂರ ಗ್ರಾಮದಲ್ಲಿ 5 ಮನೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿ ನಾವಿ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಮಲ್ಲವ್ವ ಗೌಡರ,ಕಾರ್ಯದರ್ಶಿ ಹಿರೇಮಠ, ಸದಸ್ಯರಾದ ರಮೇಶ ಕೊಪ್ಪದ, ಹನಮಂತ ವಡ್ಡರ, ಶ್ರೀಮತಿ ರೇಣುಕಾ ಕಮತರ, ಕರಿಯಪ್ಪ ತೋಟಗೇರ,ಮಾಸಪ್ಪ ಕಬ್ಬರಗಿ, ಉಮೇಶ ಹೂಗಾರ,ಬಸವರಾಜ ಮಾದರ,ಇತರೆ ಸದಸ್ಯರು ಹಾಗೂ ಪಂಚಾಯತಿ ಸಿಬ್ಬಂದಿಯವರು, ಅರೋಗ್ಯ ಇಲಾಖೆ,ಅರಣ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾಯಕರ್ತೆಯರು ಉಪಸ್ಥಿತರಿದ್ದರು.
Be the first to comment