ಜಿಲ್ಲಾ ಸುದ್ದಿಗಳು
ಹೊನ್ನಾವರ
ಪುರಾಣ ಪ್ರಸಿದ್ಧ ಹಾಗೂ ನಾಗಾರಾಧನೆಯ ಪುಣ್ಯ ತಾಣ ಎಂದೇ ಪ್ರಸಿದ್ಧಿ ಹೊಂದಿರುವ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲದಲ್ಲಿ ಚಂಪಾ ಷಷ್ಠಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಗುರುವಾರ ವಿಜೃಂಭಣೆಯಿಂದ ನಡೆಯಿತು.ಶ್ರೀ ಸುಬ್ರಹ್ಮಣ್ಯ ದೇವಾಲದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಂದ ಹಣ್ಣು-ಕಾಯಿ ಸೇವೆ, ಅರ್ಚನೆ, ಆರತಿ, ಅಭಿಷೇಕ, ಸರ್ವ ಸೇವೆ, ಅಪೂಪ ಸೇವೆ, ಪಂಚಖಾದ್ಯ ಸೇವೆ, ಲಾಡು ಪ್ರಸಾಸ ಸೇವೆ ಸೇರಿದಮತೆ ವಿವಿಧ ಸೇವೆಯನ್ನು ಸಲ್ಲಿಸಿದರು. ಸಮೀಪದ ನಾಗಬನದಲ್ಲಿರುವ ನಾಗ ದೇವರಿಗೆ ಕ್ಷೀರಾಭಿಷೇಕ, ಆರತಿ ಮತ್ತು ಫಲಾಭಿಷೇಕ ಸೇರಿದಂತೆ ವಿವಿಧ ಸೇವೆ ಸಲ್ಲಿಸಲಾಯಿತು. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಕೊವಿಡ್ ನಿಯಮ ಪಾಲನೆಯಲ್ಲಿ ಸಹಕರಿಸಿದರು. ಕೊವಿಡ್ ಮಾರ್ಗಸೂಚಿಯಂತೆ ಭಕ್ತರಿಗೆ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸೆನಿಟೈಜೇಷನ್ ಕಡ್ಡಾಯಗೊಳಿಸಲಾಗಿತ್ತು. ಆಡಳಿತ ಮಂಡಳಿಯಿಂದ ಕೊವಿಡ್ ನಿಯಮ ಪಾಲನೆಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದ ಆವಾರದಲ್ಲಿ ಅಲ್ಲಲ್ಲಿ ಕೊವಿಡ್ ನಿಯಮ ಪಾಲಿಸುವಂತೆ ಸೂಚನಾ ಫಲಕ ಅಳವಡಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯುವುದಕ್ಕೆ ವ್ಯವಸ್ಥೆ, ಸೆನಿಟೈಜರ್, ಮಾಸ್ಕ್ ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಮುಗ್ವಾ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ದರ್ಶನದಿಂದ ರೋಗ, ಕಷ್ಟ, ಕಾರ್ಪಣ್ಯಗಳು ನಿವಾರಣೆಯಾದ ಅದೆಷ್ಟೋ ನಿದರ್ಶನಗಳಿವೆ. ಆದರೆ ಕಳೆದ 2 ವರ್ಷಗಳಿಂದ ಹೆಮ್ಮಾರಿ ಕರೋನಾತಂಕದಿಂದ ಭಕ್ತರ ಸೇವೆಗೆ ಕಡಿವಾಣ ಹಾಕಲಾಗಿತ್ತು. ಈ ಬಾರಿಯ ಚಂಪಾ ಷಷ್ಠಿಯಂದು ಭಕ್ತರ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು, ನಾಡಿನ ಮೂಲೆಮೂಲೆಯಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಸಂಕಲ್ಪಿಸಿಕೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
Be the first to comment