ರಾಜ್ಯ ಸುದ್ದಿಗಳು
ದೇವನಹಳ್ಳಿ
ವಾರ್ಡ್ ಸಭೆಯ ಮೂಲಕ ಗ್ರಾಮದಲ್ಲಿ ಆಗಬೇಕಿರುವ ಕಾಮಗಾರಿಗಳ ಪಟ್ಟಿ ಮತ್ತು ಸಮಸ್ಯೆಗಳನ್ನು ಗಮನಕ್ಕೆ ತಂದರೆ ಗ್ರಾಪಂ ಹಂತದಲ್ಲಿ ಸ್ಪಂಧಿಸುವ ಕೆಲಸ ಮಾಡಲಾಗುತ್ತದೆ ಎಂದು ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಬ್ಯಾಡರಹಳ್ಳಿ ಗ್ರಾಮದ ದುರ್ಗಪರಮೇಶ್ವರಿ ದೇಗುಲದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಡ್ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಮತ್ತು ಇತರೆ ಮೂಲಭೂತ ಸಮಸ್ಯೆ ಮತ್ತು ಕುಂದುಕೊರತೆ ಇದ್ದರೆ ನಮಗೆ ತಿಳಿಸಿ ಅದನ್ನು ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.ಗ್ರಾಮಸ್ಥರಿಂದ ಅಹವಾಲು ಮತ್ತು ಚರ್ಚೆ: ಈ ಹಿಂದೆ ಬೀರಪ್ಪ ಅಧ್ಯಕ್ಷರಾಗಿದ್ದಾಗ ನಮ್ಮ ಜಾಗದಲ್ಲಿ ಹಾಕಿರುವ ಓವರ್‌ಹೆಡ್ ಟ್ಯಾಂಕ್ ಹಾಕಿಸಲಾಗಿತ್ತು. ಆದರೆ ಜಾಗದ ಪರಿಹಾರವನ್ನು ನೀಡಿಲ್ಲ. ಆ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಪ್ರಕರಣ ಇತ್ಯರ್ಥವಾಗುವವರೆಗೆ ಕಂದಾಯ ಪಾವತಿಸಲು ಆಗುವುದಿಲ್ಲ. ಈ ಸಮಸ್ಯೆ ಬಗೆಹರಿಸಿಕೊಡಬೇಕು. ಗ್ರಾಮದಲ್ಲಿ ಸಮುದಾಯ ಭವನದ ಅವಶ್ಯಕತೆ ಇದೆ ಮಾಡಿಸಿಕೊಡಬೇಕು. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಉತ್ತಮ ಸಮುದಾಯ ಶೌಚಾಲಯ ಕಟ್ಟಿಸಿಕೊಡಬೇಕು. ಗ್ರಾಮದ ಓಣಿ ರಸ್ತೆ ಅಭಿವೃದ್ಧಿ ಪಡಿಸಬೇಕು. ವಿಶ್ವನಾಥಪುರ ಗ್ರಾಮದಲ್ಲಿ ಅನುಪಯುಕ್ತ ಕಟ್ಟಡ ವಿಕಾಸ ಸಂಸ್ಥೆಗೆ ಜಾಗ ಕೊಡಬೇಕು. ಸಾರ್ವಜನಿಕ ರಸ್ತೆ ದುರಸ್ಥಿಗೊಳಿಸಿಕೊಡಿ ಎಂದು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ಗ್ರಾಮಸ್ಥರು ಮಂಡಿಸಿದರು.
ಗ್ರಾಪಂ ಉಪಾಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ವಿಶ್ವನಾಥಪುರ ಗ್ರಾಮದಲ್ಲಿರುವ ಕಟ್ಟಡವು ಪಂಚಾಯಿತಿ ಜಾಗವಾಗಿರುವುದರಿಂದ ವಿಕಾಸ ಸಂಸ್ಥೆಗೆ ನೀಡಲು ಬರುವುದಿಲ್ಲ. ಬೇರೆ ಜಾಗದಲ್ಲಿ ಕಟ್ಟಡ ಗುರ್ತಿಸಿ ಬಾಡಿಗೆಗೆ ನೀಡಲಾಗುತ್ತದೆ. ಈಗಾಗಲೇ ಬ್ಯಾಡರಹಳ್ಳಿ ಗ್ರಾಮವೊಂದಕ್ಕೆ ಸುಮಾರು ೭ಲಕ್ಷ ರೂ.ಗೂ ಹೆಚ್ಚಿನ ಅನುದಾನ ವಿವಿಧ ಕಾಮಗಾರಿಗಳ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಪಿಡಿಒ ಗಂಗರಾಜು ಮಾತನಾಡಿ, ಈಗಾಗಲೇ ನಿಮ್ಮ ಗ್ರಾಮಕ್ಕೆ ಮತ್ತು ಬೈರದೇನಹಳ್ಳಿ ಗ್ರಾಮಕ್ಕೆ ೩೦*೩೦ಅಡಿಗಳ ತಲಾ ಒಂದೊಂದು ಸಂಪ್‌ಗೆ ಮಂಜೂರು ದೊರೆತಿದೆ. ಸಂಪ್‌ಗೆ ಜಾಗ ಗುರ್ತಿಸಿಕೊಟ್ಟರೆ ಕಾಮಗಾರಿ ಪ್ರಾರಂಭಿಸುತ್ತೇವೆ. ಗ್ರಾಮಸ್ಥರು ನೀಡಿರುವ ಅಹವಾಲುಗಳನ್ನು ಸರ್ವ ಸದಸ್ಯರೊಂದಿಗೆ ಚರ್ಚಿಸಿ ಆದಷ್ಟು ಬೇಗ ಪರಿಹರಿಸಲು ಮುಂದಾಗುತ್ತೇವೆ ಎಂದು ಸಭೆಗೆ ಸೂಚಿಸಿದರು.
ಈ ವೇಳೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳ, ಉಪಾಧ್ಯಕ್ಷ ವಿನಯ್‌ಕುಮಾರ್, ಪಿಡಿಒ ಗಂಗರಾಜು, ಸದಸ್ಯರಾದ ನಾಗರಾಜು, ದಿವ್ಯಭಾರತೀ, ಸಿ.ನಾಗಮ್ಮ, ಮಾಜಿ ಸದಸ್ಯ ಆಂಜಿನಪ್ಪ, ಹಿರಿಯ ಗ್ರಾಮಸ್ಥರು ಇದ್ದರು.
Be the first to comment