ರಾಜ್ಯ ಸುದ್ದಿಗಳು
ದೇವನಹಳ್ಳಿ
ಜೆಡಿಎಸ್ ಪಕ್ಷ ಕುಮಾರಸ್ವಾಮಿ, ದೇವೇಗೌಡ ಪಕ್ಷ ಅಲ್ಲ, ಇಡೀ ರೈತರ, ಕಾರ್ಯಕರ್ತರ ಪಕ್ಷವಾಗಿದೆ. ಜೆಡಿಎಸ್ ಪಕ್ಷ ಕಟ್ಟಲು ಹಲವು ಕಷ್ಟಗಳನ್ನು ಅನುಭವಿಸಿದ್ದೇನೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಅಭಿಮತ ವ್ಯಕ್ತಪಡಿಸಿದರು.ದೇವನಹಳ್ಳಿ ತಾಲೂಕಿನ ಮಾಳಿಗೇನಹಳ್ಳಿ ಗ್ರಾಮದ ಸಮೀಪದ ಸಿಂಧೂರ ಕನ್ವೆಂಷನ್ ಹಾಲ್‌ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಮೇಶ್‌ಗೌಡ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಮಾಡಿಕೊಳ್ಳುವುದು ಇಲ್ಲ. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿಗೆ ಮತ ನೀಡದಂತೆ ಸೂಚನೆ ನೀಡಿದ್ದೇನೆ. ಡಿ.೧೩ಕ್ಕೆ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ. ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜನಪರ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ಜೆಡಿಎಸ್ ಪಕ್ಷ ನಿರ್ನಾಮ ಮಾಡಲು ಕಾಂಗ್ರೆಸ್-ಬಿಜೆಪಿಯಿಂದ ಸಾಧ್ಯವಿಲ್ಲ. ನಮ್ಮನ್ನು ಪ್ರತಿ ಹಂತದಲ್ಲೂ ಟೀಕಿಸುತ್ತಾ ಜೆಡಿಎಸ್ ಪಕ್ಷವನ್ನೇ ಸರ್ವನಾಶ ಮಾಡುವ ಸಂಚು ರೂಪಿಸಿದವರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿಗೆ ಮತ ನೀಡಿ ಪಾಠ ಕಲಿಸಬೇಕು. ನನಗೆ ೮೯ ವರ್ಷವಾಗಿದೆ. ವಯಸ್ಸಾಗಿದೆಯೇ ಹೊರತು ಬುದ್ಧಿಮಾಂದ್ಯವಾಗಿಲ್ಲ. ನನ್ನ ಉಸಿರುವ ಇರುವ ತನಕ ಪಕ್ಷ ಸಂಘಟಿಸುತ್ತಲೇ ಇರುತ್ತೇನೆ. ಇದು ಕಾರ್ಯಕರ್ತರ ಪಕ್ಷವಾಗಿದೆ. ನೀವೇ ಮುನ್ನಡೆಸಿಕೊಂಡು ಹೋಗಬೇಕಿದೆ. ಜಿಪಂ, ತಾಪಂ ಮತ್ತು ಗ್ರಾಪಂಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಸಮುದಾಯಗಳಿಗೆ (ಒಕ್ಕಲಿಗ ಮತ್ತು ಲಿಂಗಾಯತ ಹೊರತುಪಡಿಸಿ), ಶಕ್ತಿತುಂಬಿರುವುದರ ಜತೆಗೆ ಮಹಿಳೆಯರಿಗೆ ಶೇ.೩೩ ಮೀಸಲಾತಿ ಕೊಡಲಿಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಲಾಗಿದ್ದರಿಂದ ಇಂದು ಮಹಿಳೆಯರು ಎಲ್ಲಾ ಕಡೆಯಲ್ಲೂ ಗುರ್ತಿಸಿಕೊಂಡಿದ್ದಾರೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ರಮೇಶ್‌ಗೌಡ ಅವರಿಗೆ ಕ್ರಮ ಸಂಖ್ಯೆ ೨ಕ್ಕೆ ಮತ ಹಾಕಿ ಗೆಲ್ಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ರಮೇಶ್‌ಗೌಡ ಮಾತನಾಡಿ, ಈ ಕ್ಷೇತ್ರಕ್ಕೆ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ ವರಿಷ್ಠರಾದ ದೇವೇಗೌಡ ಅಪ್ಪಾಜಿಯವರ ಆಶೀರ್ವಾದ ಮತ್ತು ನಿಮ್ಮೆಲ್ಲರ ಪ್ರೀತಿ ನನಗೆ ಎಂಎಲ್‌ಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದೆ. ನಾನು ವಾಸ್ತವದಲ್ಲಿ ಹೊಸಕೋಟೆಯವನಾಗಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ಜನರೊಂದಿಗೆ ಬೆರೆತಿದ್ದೇನೆ. ಈ ಬಾರಿ ನನಗೆ ಹೆಚ್ಚು ಬಹುಮತವನ್ನು ನೀಡಿ ಗೆಲ್ಲಿಸಿಕೊಂಡರೆ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ನಿಮ್ಮ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದು ಸ್ಪಂಧಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಈ ವೇಳೆಯಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಜೆಡಿಎಸ್ ಮುಖಂಡರಾದ ಆರ್.ಕೆ.ನಂಜೇಗೌಡ, ಕೆ.ವಿ.ಮಂಜುನಾಥ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜ್, ಎಸ್.ನಾಗೇಶ್, ಚಿಕ್ಕನಾರಾಯಣಸ್ವಾಮಿ, ಯರ್ತಿಗಾನಹಳ್ಳಿ ಶಿವಣ್ಣ, ವೀರಪ್ಪ, ನಾಗರಾಜು, ಕಾರ್ಯಾಧ್ಯಕ್ಷ ಲಕ್ಷ್ಮಣ್, ಸೊಸೈಟಿ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಪ್ರಭಾಕರ್, ಹನುಮಂತಪ್ಪ, ನರಸಿಂಹಣ್ಣ, ವೆಂಕಟೇಗೌಡ, ವೆಂಕಟೇಶ್‌ಮೂರ್ತಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಇದ್ದರು.
Be the first to comment