ಜಿಲ್ಲಾ ಸುದ್ದಿಗಳು
ಕುಮಟಾ:
ತಾಲೂಕಿನ ತಂಡ್ರಕುಳಿಯಲ್ಲಿ ಐಆರ್‌ಬಿಯವರು ನಡೆಸಿದ ಬಾಂಬ್ ಸ್ಪೋಟ್‌ದಿಂದ ಆತಂಕಗೊಂಡ ಸ್ಥಳೀಯರು ಹೆದ್ದಾರಿ ತಡೆದು ಹಠಾತ್ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮೊದಲಿನಿಂದಲೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಬೇಕಾಬಿಟ್ಟಿ ಬಾಂಬ್ ಸ್ಪೋಟ್ ಮಾಡಿದ ಪರಿಣಾಮ ಮಳೆಗಾಲದಲ್ಲಿ ಗುಡ್ಡ ಕುಸಿದು ಮೂವರು ಜೀವಂತ ಸಮಾಧಿಯಾಗಿದ್ದರು. ಅಂದಿನಿಂದ ಇಂದಿನ ವರೆಗೂ ಆ ಭಾಗದಲ್ಲಿ ಬಾಂಬ್ ಸ್ಪೋಟ್ ಮಾಡಲು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಆ ಭಾಗದಲ್ಲಿ ಮಾತ್ರ ಚತುಷ್ಪಥ ಕಾಮಗಾರಿ ಅಪೂರ್ಣಗೊಂಡಿದೆ. ಹಾಗಾಗಿ ಕಾಮಗಾರಿ ಮುಂದುವರೆಸುವ ಉದ್ದೇಶದಿಂದ ಐಆರ್‌ಬಿಯು ಇಂದು ಗುಡ್ಡವನ್ನು ಒಡೆಯಲು ಬಾಂಬ್ ಸ್ಪೋಟ್ ಮಾಡಿತ್ತು. ಸ್ಪೋಟದ ಪರಿಣಾಮ ಭೂ ಕಂಪನಗೊಂಡು, ಸ್ಥಳೀಯ ಮನೆಗಳಿಗೆ ಬಿರುಕು ಬಿಟ್ಟಿದೆ ಎಂದು ಆರೋಪಿಸಿದ ಸ್ಥಳೀಯರು ಹೆದ್ದಾರಿ ತೆಡೆದು ಹಠಾತ್ ಪ್ರತಿಭಟನೆ ನಡೆಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಮಾಹಿತಿ ಪಡೆದ ಶಾಸಕ ದಿನಕರ ಶೆಟ್ಟಿ, ಉಪವಿಭಾಗಾಧಿಕಾರಿ ರಾಹುಲ ರತ್ನಂ ಪಾಂಡೆ ಮತ್ತು ತಹಸೀಲ್ದಾರ್ ವಿವೇಕ ಶೇಣ್ವಿ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರನ್ನು ಸಮಾಧಾನ ಪಡಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಪೋಲಿಸರು ಹಾಗೂ ಗ್ರಾಮಸ್ಥರ ನಡುಚೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಐ ಆರ್ ಬಿ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರು ಸ್ಥಳೀಯರ ಪರವಾಗಿ ಮಾತನಾಡಿದರು. ಕಾಮಗಾರಿ ಕೈಗೊಳ್ಳುವ ಮೊದಲು ಸ್ಥಳೀಯರಿಗೆ ಮಾಹಿತಿ ನೀಡಿ, ಸೂಕ್ತ ಪರಿಹಾರ ನೀಡುವ ಜೊತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನು ಮಾಡದೇ ಏಕಾಏಕಿ ಬಂದು ಬಾಂಬ್ ಸ್ಪೋಟ್ ಮಾಡಿದರೆ, ಸ್ಥಳೀಯರಿಗೆ ತೊಂದರೆಯಾಗುತ್ತದೆ. ಸ್ಪೋಟ್‌ದಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿ ಏನಾದರೂ ಅವಘಡ ಸಂಭವಿಸಿದರೆ, ಯಾರೂ ಹೊಣೆ. ಹಾಗಾಗಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಕಾಮಗಾರಿ ನಡೆಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಕೈಗೊಳ್ಳುವ ಜೊತೆಗೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಸ್ಥಳೀಯರಿಗೆ ಯಾವುದೇ ತೊಂದರೆಯಾಗದAತೆ ಕಾಮಗಾರಿ ಕೈಗೊಳ್ಳಬೇಕು. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕರು ಯಾವುದೇ ಸ್ಪೋಟಕ ಬಳಸಿ ಬಂಡೆ ಒಡಯದಂತೆ ತಾಕೀತು ಮಾಡಿದರು. ಅಲ್ಲದೇ ಈಗಾಗಲೇ ಗುರುತಿಸಲಾದ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕೊಟ್ಟು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಕಾಮಗಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಪ್ರತಿಕ್ರಿಯೆ ನೀಡಿದ ಉಪವಿಭಾಗಾಧಿಕಾರಿ ರಾಹುಲ ರತ್ನಂ ಪಾಂಡೆ ಅವರು, ಸದ್ಯ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಮುಂದಿನ ದಿನಗಳಲ್ಲಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿ, ಕಾಮಗಾರಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಬಳಿಕ ಪ್ರತಿಭಟನಾಕಾರರು ಶಾಂತರಾಗಿ ಅಲ್ಲಿಂದ ತೆರಳಿದರು.
ಈ ಪ್ರತಿಭಟನೆಯಿಂದ ಒಂದು ಗಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ಬಳಿಕ ಪಿಎಸ್‌ಐ ರವಿ ಗುಡ್ಡಿ ನೇತೃತ್ವದ ಪೊಲೀಸರ ತಂಡ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು
Be the first to comment