ಜಿಲ್ಲಾ ಸುದ್ದಿಗಳು
ಭಟ್ಕಳ ಜಾಮಿಯಾಬಾದ್ ರಸ್ತೆಯ ರಹಮತಾಬಾದ್ ಪ್ರದೇಶದಲ್ಲಿ ರಸ್ತೆಯಲ್ಲಿಯೇ ಕಸವನ್ನು ಚೆಲ್ಲಿ ಅತ್ಯಂತ ಗಲೀಜು ಪರಿಸ್ಥಿತಿ ನಿರ್ಮಾಣವಾಗಿದ್ದು ತಕ್ಷಣ ಕಸವನ್ನು ತೆಗೆದು ಈ ಭಾಗದ ನಾಗರೀಕರ ಸಹಜ ಬುದುಕಿಗೆ ಅವಕಾಶ ಮಾಡಿಕೊಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನಿವಿಯಲ್ಲಿ ಜಾಮಿಯಾಬಾದ್ ರಸ್ತೆಯಲ್ಲಿರುವ ರಹಮತಾಬಾದ್ ಪ್ರದೇಶದಲ್ಲಿ ಕಸವನ್ನು ರಸ್ತೆಯಲ್ಲಿಯೇ ಹಾಕುತ್ತಿರುವುದರಿಂದ ಅಕ್ಕ ಪಕ್ಕದ ಮನೆಯವರಿಗೆ ತೀರಾ ತೊಂದರೆಯಾಗುತ್ತಿದೆ. ಕಸದ ರಾಶಿಯಿಂದಾಗಿ ಸೊಳ್ಳೆಗಳು ಜಾಸ್ತಿಯಾಗಿದ್ದು ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕೂಡಾ ಇದೆ. ಕಸದ ರಾಶಿ ಕೊಳೆತು ಕೆಟ್ಟ ವಾಸನೆ ಬೀರುವುದರಿಂದ ಇಡೀ ಪರಿಸರವೇ ಹಾಳಾಗಿ ಹೋಗಿದೆ. ಈ ಭಾಗದಲ್ಲಿರುವ ಮನೆಗಳಲ್ಲಿ ಕುಳಿತು ಊಟ ಮಾಡುವುದಕ್ಕೂ ಸಹ ತೊಂದರೆಯಾಗಿದ್ದಲ್ಲದೇ ಮಕ್ಕಳು, ಮಹಿಳೆಯರು, ವೃದ್ಧರು ಕಾಯಿಲೆಯ ಭೀತಿಯಿಂದ ದಿನ ಕಳೆಯುವಂತಾಗಿದೆ ಎಂದು ಹೇಳಿದ್ದಾರೆ.
ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಮನವಿಯನ್ನು ಕಚೇರಿ ವ್ಯವಸ್ಥಾಪಕಿ ಲತಾ ನಾಯ್ಕ ಅವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು.
Be the first to comment