ಜಿಲ್ಲಾ ಸುದ್ದಿಗಳು
ಭಟ್ಕಳ್
ಭಟ್ಕಳದ ಮಹಾಜನತೆಯಲ್ಲಿ ಮನವಿ ನಮ್ಮ ಭಟ್ಕಳ ತಾಲೂಕು ಎಲ್ಲರೂ ಇಷ್ಟಪಡುವ ಭಟ್ಕಳ ಮಲ್ಲಿಗೆ, ಗಿರಾಸಾಲೆ ಅಕ್ಕಿ, ಭಟ್ಕಳ ಹಲ್ವಾ, ಭಟ್ಕಳ ಬಿರಿಯಾನಿ, ಹೀಗೆ ಹತ್ತು ಹಲವು ವಿಶೇಷಗಳಿಂದಾಗಿ ವಿವಿಧ ಜಾತಿ ಜನಾಂಗಗಳಾದ, ನಾಮಧಾರಿ, ದೇವಾಡಿಗ, ಗೊಂಡ, ಮೊಗೇರ, ಖಾರ್ವಿ, ಹರಿಕಾಂತ, ಭಂಡಾರಿ, ಆಚಾರಿ, ಶೆಟ್ಟಿ, ಮಹಾಲೆ, ಕೆಲ್ಸಿ, ಮಡಿವಾಳ, ದೇಶಭಂಡಾರಿ, ಸಮಗಾರ, ಬಾಕಡ್, ಹಳ್ಳೆರ್, ಹಾಸ್ಲಾರ್, ಕೊಂಕಣಿ, ಬ್ರಾಹ್ಮಣ,ಸೋನಾರ್,ಸಾರಸ್ವತ ಹೀಗೆ ಹಲವು ಜಾತಿಯ ಹಿಂದೂಗಳು, ಹಾಗೂ ಮುಸ್ಲಿಮ್, ಕ್ರಿಸ್ಟಿಯನ್ ಜನಾಂಗದ ಜನರಿಂದ ಕೂಡಿದ ವಿಶೇಷ ತಾಲೂಕು ನಮ್ಮ ಭಟ್ಕಳ. ಸರ್ವೆ ಸಾಮಾನ್ಯವಾಗಿ ಮೇಲೆ ಹೇಳಿದ ಹಿಂಧು ಜನಾಂಗದ ಎಲ್ಲಾ ಜನರ ಆಚಾರ ವಿಚಾರ, ಆಹಾರ, ಉಡುಗೆ ತೊಡುಗೆ, ಮಾತನಾಡುವ ಭಾಷೆ, ಪೂಜೆ ಪುನಸ್ಕಾರ, ಮದುವೆ ಮುಂತಾದ ರೀತಿ ರಿವಾಜುಗಳೆಲ್ಲದರಿಂದಲೂ ಸಾಮ್ಯತೆ ಇದ್ದು ಎಲ್ಲರ ಜೀವನ ಶೈಲಿ ಒಂದೇ ರೀತಿಯದ್ದಾಗಿ ಒಬ್ಬರಿಗೊಬ್ಬರು ತುಂಬಾ ಅನ್ಯೋನ್ಯತೆಯಿಂದ ಬಾಳಿ ಬದುಕಿ ಬಂದ ಸಮಾಜದ ನಮ್ಮ ಭಟ್ಕಳದವರದ್ದು. ನಮ್ಮಲ್ಲಿ ಇಲ್ಲಿಯವರೆಗೂ ಜಾತಿ ಜನಾಂಗದ ವಿಚಾರವಾಗಿ ಎಂದೂ ಭಿನ್ನಾಭಿಪ್ರಾಯ ಬಂದಿದ್ದಾಗಲಿ, ಒಬ್ಬರಿಗೊಬ್ಬರು ದ್ವೇಷದಿಂದ ಜಗಳ ಡೊಂಬಿ ಮಾಡಿಕೊಂಡ ಉದಾಹರಣೆಗಳಿಲ್ಲದ ತಾಲೂಕು ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು.
ಆದರೆ ತುಂಬಾ ಖೇದಕರ ಸಂಗತಿ ಏನೆಂದರೆ, ಇತ್ತೀಚಿಗೆ ಕೆಲವರು ತಮ್ಮ ವಯಕ್ತಿಕವಿಚಾರಕ್ಕಾಗಿ ಜಗಳ ಹೊಡೆಬಡಿಮಾಡಿ ಕೊಂಡು ಪೊಲೀಸ್ ಠಾಣೆ ಮೆಟ್ಟಲೇರಿ ಜಾತಿ ನಿಂದನೆ ಎಂಬ ಸುಳ್ಳು ಪ್ರಕರಣ ದಾಖಲಿಸಿ ಜಾತಿ ಜನಾಂಗದ ಮದ್ಯೆ ದ್ವೇಷ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಸಮಾಜದ ಸ್ವಾಸ್ತ್ಯ, ನೆಮ್ಮದಿ, ಪ್ರೀತಿ ವಿಶ್ವಾಸ, ಬ್ರಾತೃತ್ವವನ್ನು ಹಾಳು ಮಾಡುತ್ತದೆ. ಅಲ್ಲದೇ ಒಂದು ಸಮಾಜದವರು ಮತ್ತೊಂದು ಸಮಾಜದವರನ್ನು ಅಪನಂಬಿಕೆ ಯಿಂದ ನೋಡುವ ಪರಿಸ್ಥಿತಿ ಉಂಟಾಗಿ ಸಮಾಜದಲ್ಲಿ ದ್ವೇಷ, ಅಸೂಯೆ ಉಂಟಾಗಿ ಸಮಾಜ ಸಮಾಜಗಳ ಮದ್ಯದಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಕಡಿಮೆಯಾಗುತ್ತಿದೆ. ಇದು ಭವಿಷ್ಯದ ದ್ರಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇದೇ ರೀತಿ ಮುಂದುವರಿದರೆ ಅವರವರ ಜಾತಿಯವರನ್ನು ಬೆಂಬಲಿಸುವ ಭರಾಟೆಯಲ್ಲಿಒಬ್ಬರಿಗೊಬ್ಬರು ಎದುರು ಬದುರಿನವರ ಜಾತಿಯ ಅಸ್ತಿತ್ವದ ಪ್ರಶ್ನೆ ಮಾಡುವ ಸಂದರ್ಭ ಉಂಟಾದರೂ ಆಶ್ಚರ್ಯವಿಲ್ಲಾ. ಈಗಾಗಲೇ ಭಟ್ಕಳ ಕೋಮು ಗಲಭೆ ವಿಚಾರದಲ್ಲಿ ಕುಖ್ಯಾತಿ ಪಡೆದಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಭಟ್ಕಳದ ಜನರೊಂದಿಗೆ ವೈವಾಹಿಕ ಸಂಬಂಧ ಬೆಳೆಸಲು ಬೇರೆ ತಾಲೂಕಿನ ಜನರು ಹಿಂದೇಟು ಹಾಕುವಂತಾಗಿದೆ.
ಕಾರಣ ಈ ಮೂಲಕ ಭಟ್ಕಳದ ಎಲ್ಲಾ ಸಮಾಜ ಬಾಂಧವರಲ್ಲಿ, ವಿಶೇಷವಾಗಿ ಗೊಂಡ ಮತ್ತು ಮೊಗೇರ್ ಜಾತಿಯ ಮುಖಂಡರಲ್ಲಿ ನನ್ನ ಮನವಿ ಏನಂದರೆ ಯಾರೇ ಆಗಲಿ, ಯಾವುದೇ ಇಬ್ಬರು ವ್ಯಕ್ತಿಗಳ ಮದ್ಯದಲ್ಲಿ ಏನಾದರೂ ವಯಕ್ತಿಕ ಜಗಳ ಹೊಡೆಡಾಟದ ಪ್ರಕರಣವಾದರೆ ದಯವಿಟ್ಟು ಅಂತಹ ಪ್ರಕರಣದಲ್ಲಿ ನಿಮ್ಮ ಎದುರಾಳಿಗೆ ಬುದ್ದಿಕಲಿಸುವ ಭರಾಟೆಯಲ್ಲಿ ನಿಮ್ಮ ವಯಕ್ತಿಕ ಜಗಳವನ್ನ ತಿರುಚಿ ಅದನ್ನು ಜಾತಿ ನಿಂದನೆ ಪ್ರಕರಣಗಳನ್ನಾಗಿ ಪರಿವರ್ತಿಸಬೇಡಿ. ಸ್ವಾಸ್ತ ಸಮಾಜದ ನಿರ್ಮಾಣದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾರಣ ಸಮಾಜದ ಮುಖಂಡರು ಈ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಲು ತಮ್ಮ ತಮ್ಮ ಸಮಾಜದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಿದೆ. ಇದು ನಮ್ಮ ಭಟ್ಕಳದ ಜನರ ಮೇಲಿರುವ ನನ್ನ ವಯಕ್ತಿಕ ಕಳಕಳಿ ಹಾಗೂ ಜವಾಬ್ದಾರಿ. ಇದನ್ನು ಇತ್ತೀಚಿನ ಕೆಲವು ಘಟನೆಗಳನ್ನು ನೋಡಿ ಮನವಿ ಮಾಡಿರುತ್ತಿದ್ದೇನೆ ಹೊರತು ಯಾವುದೇ ವಕ್ತಿಯನ್ನುದ್ದೇಶಿಸಿದ್ದಲ್ಲ.
Be the first to comment