ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದೆ ಸರ್ಕಾರದಿಂದ ಅನ್ಯಾಯ- ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್ ಘೋಟ್ನೆಕರ 

ವರದಿ-ಕುಮಾರ್ ನಾಯ್ಕ.ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಹಳಿಯಾಳ

ತಾಲೂಕಿನಲ್ಲಿ ಮೆಕ್ಕೆಜೋಳ ಹಂಗಾಮು ಆರಂಭವಾಗಿ 20 ದಿನಗಳು ಕಳೆಯುತ್ತಾ ಬಂದರು ಸರಕಾರ ಮಾತ್ರ ಈವರೆಗೂ ಖರೀದಿ ಕೇಂದ್ರವನ್ನು ತೆರೆಯದೆ ಈ ಭಾಗದ ರೈತರಿಗೆ ಮೋಸ ಮಾಡುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಘೋಟ್ನೇಕರ ಆರೋಪಿಸಿದ್ದಾರೆ.ಇಂದು ಪಟ್ಟಣದಲ್ಲಿರುವ ಎಪಿಎಂಸಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು ಸರಕಾರವು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯುತ್ತೇವೆ ಎಂದು ಹೇಳಿ ಕಳೆದ ಎರಡು ವರ್ಷದಿಂದ ಖರೀದಿ ಕೇಂದ್ರವನ್ನು ತೆರೆಯದೆ ಇರುವುದರಿಂದ ಮೆಕ್ಕೆಜೋಳ ಬೆಳೆಯುವ ರೈತರಿಗೆ ನಷ್ಟ ಉಂಟಾಗುತ್ತಿದೆ. ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸಿ ಬೆಂಬಲ ಬೆಲೆ ನೀಡಿ ರೈತರ ಹಿತರಕ್ಷಣೆಗೆ ಬದ್ಧವಾಗಿದ್ದೇವೆ ಎಂದು ಹೇಳಿಕೆ ನೀಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಕೇವಲ ಕಾಗದದಲ್ಲಿ ಮಾತ್ರ ಖರೀದಿ ಕೇಂದ್ರವನ್ನು ತೆರೆದಿದೆ ಎಂದು ಲೇವಡಿ ಮಾಡಿದರು. ಖರೀದಿ ಕೇಂದ್ರವನ್ನು ಸ್ಥಾಪಿಸದೆ ಇರುವುದರಿಂದ ದಲ್ಲಾಳಿಗಳು ರೈತರಿಗೆ ಭಾರಿ ಪ್ರಮಾಣದಲ್ಲಿ ಮೋಸ ಮಾಡುತ್ತಿದ್ದಾರೆ. ಹಂಗಾಮು ಆರಂಭ ಸಂದರ್ಭದಲ್ಲಿ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 1800-1850 ರು. ಗಳ ದರ ನಿಗದಿಯಾಗಿತ್ತು. ಆದರೆ ಪ್ರಸ್ತುತ ವಾರದಲ್ಲಿ 1600-1700 ದರ ನಿಗದಿಯಾಗಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಸರಕಾರವು ಪ್ರತಿ ಕ್ವಿಂಟಲ್ ಗೋವಿನಜೋಳಕ್ಕೆ 1870 ರುಪಾಯಿಗಳನ್ನು ನಿಗದಿ ಮಾಡಿದೆ. ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸುವಂತೆ ಕೃಷಿ ಹಾಗೂ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ ಆದ್ದರಿಂದ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಆಗ್ರಹಿಸಿದರು.

CHETAN KENDULI

ಒಂದಾನು ವೇಳೆ ಖರೀದಿ ಕೇಂದ್ರವನ್ನು ತೆರೆಯದಿದ್ದರೆ ದಲ್ಲಾಳಿಗಳಿಂದ ಉಂಟಾಗುತ್ತಿರುವ ಮೋಸವು ಮುಂದುವರಿಯುತ್ತದೆ ಇದರಿಂದಾಗಿ ರೈತರ ಆರ್ಥಿಕ ಪರಿಸ್ಥಿತಿಯು ಇನ್ನು ಹದಗೆಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ದಲ್ಲಾಳಿಗಳಿಂದ ರೈತರಿಗೆ ಉಂಟಾಗುತ್ತಿರುವ ಮೋಸವನ್ನು ಈ ಹಿಂದೆ ತಡೆಗಟ್ಟಲು ಎಪಿಎಂಸಿ ಸಿಬ್ಬಂದಿ ಮತ್ತು ಸದಸ್ಯರುಗಳಿಗೆ ಅಧಿಕಾರ ನೀಡಲಾಗಿತ್ತು ಆದರೆ ಕೇಂದ್ರ ಸರಕಾರ ನೂತನ ಕೃಷಿ ಕಾಯ್ದೆ ಜಾರಿ ಮಾಡಿ ಅಧಿಕಾರವನ್ನು ಮೊಟಕುಗೊಳಿಸಿದ್ದಾರೆ. ನೂತನ ಕೃಷಿ ಕಾಯಿದೆಯಿಂದ ರೈತರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಅಷ್ಟೇ ಅಲ್ಲದೆ ಎಪಿಎಂಸಿಗೆ ಹರಿದುಬರುತ್ತಿದ್ದ ಆದಾಯವು ನಿಂತಿರುವುದರಿಂದ ವಿದ್ಯುತ್ ಶುಲ್ಕ ಹಾಗೂ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಗುತ್ತಿಗೆ ಹಾಗೂ ಸರಕಾರಿ ನೌಕರರು ಸೇರಿದಂತೆ 21 ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಾದ ಪಟ್ಟಣದಲ್ಲಿರುವ ಎಪಿಎಂಸಿಯಲ್ಲಿ ಸದ್ಯ ಕೇವಲ 12 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದರು.

Be the first to comment

Leave a Reply

Your email address will not be published.


*