ಜಿಲ್ಲಾ ಸುದ್ದಿಗಳು
ಯಲ್ಲಾಪುರ
ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊನಗದ್ದೆಯ ಕುಂಬ್ರಿಕೊಟ್ಟಿಗೆ ಕ್ರಾಸ್ ನಿಂದ ಕೊಡ್ಲಗದ್ದೆ ಕೂಡು ರಸ್ತೆ ಅತಿವೃಷ್ಟಿಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಜನ, ವಾಹನ ಓಡಾಡಲು ಸಾಧ್ಯವಾಗದಂತಾಗಿದೆ.ಕಳೆದ ಬೇಸಿಗೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಈ ಕೂಡು ರಸ್ತೆಗೆ ಸಚಿವ ಶಿವರಾಮ ಹೆಬ್ಬಾರ ಅವರ ವಿಶೇಷ ಆಸಕ್ತಿಯಿಂದ ಸಂಪೂರ್ಣ ಕಡೀಕರಣಗೊಳಿಸಲಾಗಿತ್ತು. ಆದರೆ ಕಳೆದ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ರಸ್ತೆಯ ಮಧ್ಯೆ ಕಾಲುವೆ ಉಂಟಾಗಿದೆ. ನೀರಿನ ರಭಸಕ್ಕೆ ಇಳಿಜಾರು ರಸ್ತೆಯ ಕಡಿ ಎಲ್ಲ ಕೊಚ್ಚಿಕೊಂಡು ಹೋಗಿದೆ. ಅಲ್ಲಲ್ಲಿ ರಸ್ತೆ ಪಕ್ಕದ ಗುಡ್ಡವೂ ಜರಿದು ಕಲ್ಲು, ಮಣ್ಣುಗಳು ರಸ್ತೆಯಲ್ಲಿ ಬಿದ್ದಿವೆ.
ಈ ಕೂಡು ರಸ್ತೆಯನ್ನು ಪುನಃ ದುರಸ್ತಿ ಮಾಡಲು ಇಲಾಖೆ, ಗುತ್ತಿಗೆದಾರರು ಹರಸಾಹಸ ಪಡಬೇಕಾದ ಸ್ಥಿತಿ ಬಂದೊದಗಿದೆ. ಇಂತಹ ಸ್ಥಿತಿ ಉಂಟಾಗಿ 2 ತಿಂಗಳುಗಳೇ ಕಳೆದಿದೆ. ರಸ್ತೆಯಲ್ಲಿ ಬಿದ್ದ ಮಣ್ಣು ಖುಲ್ಲಾಪಡಿಸಿ, ಕೊಚ್ಚಿಹೋದ ಕಡಿಯನ್ನು ಸರಿಪಡಿಸಿ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯತೆ ಇದೆ.ಈ ಕೂಡುರಸ್ತೆ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಕೊಡ್ಲಗದ್ದೆಯನ್ನು ಜೋಡಿಸುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆ ಕಡೀಕರಣ ಮಾಡಿದ್ದರಿಂದ ಕುಂಬ್ರಿಕೊಟ್ಟಿಗೆ ಹಾಗೂ ಕೊಡ್ಲಗದ್ದೆ ಭಾಗದ ಜನರಿಗೆ ತುಂಬಾ ಅನುಕೂಲಕರವಾಗಿತ್ತು. ಆದರೆ ಅತಿವೃಷ್ಟಿಯ ಆಘಾತದಿಂದಾಗಿ ರಸ್ತೆಯ ಬಹುಪಾಲು ಕೊಚ್ಚಿ ಹೋಗಿರುವುದರಿಂದ ಸಮಸ್ಯೆಯಾಗಿದೆ. ಈಗ ರಸ್ತೆ ನಿರ್ವಹಣೆ ಕೈಗೊಳ್ಳುವುದು ಅಗತ್ಯವಾಗಿದೆ.
ಈ ಭಾಗದ ಜನ ಒಂದು ಸಣ್ಣ ಬೆಂಕಿಪೆÇಟ್ಟಣ ತರುವುದೆಂದರೂ, ಕಿಲೋಮೀಟರ್ ಗಟ್ಟಲೆ ಘಟ್ಟ ಹತ್ತಿ ಬರಬೇಕಿದೆ. ಈ ಪ್ರದೇಶದ ಜನ ಇಳಿಜಾರು, ಘಟ್ಟದ ರಸ್ತೆಯಲ್ಲಿ ಓಡಾಡುವುದಕ್ಕೆ ನಿತ್ಯ ಸಾಹಸ ಮಾಡಬೇಕಿದೆ. ಗ್ರಾಮಸ್ಥರಿಗೆ ಅನಾರೋಗ್ಯ ಉಂಟಾದರೆ, ಇನ್ನೇನೋ ಸಮಸ್ಯೆಯಾದರೆ ಓಡಾಡುವುದು ಸಹ ಸವಾಲಾಗಿದೆ.ಹೀಗಿರುವಾಗ ಮಳೆಗೆ ಸಂಪೂರ್ಣ ಹಾಳಾದ ರಸ್ತೆ ತುರ್ತಾಗಿ ದುರಸ್ತಿ ಆಗಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
Be the first to comment