ರಾಜ್ಯ ಸುದ್ದಿಗಳು
ಮೈಸೂರು
ವಕೀಲನೊಬ್ಬ ಒಂದೇ ವರ್ಷದಲ್ಲಿ ಮೂವರು ಮಹಿಳೆಯರನ್ನು ಹಣದ ಆಸೆಗೆ ಮದುವೆಯಾಗಿ ವಂಚಿಸಿರುವ ಘಟನೆ ಕೆ.ಆರ್.ನಗರದಲ್ಲಿ ನಡೆದಿದೆ. ಈ ಸಂಬಂದ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆ.ಆರ್ ನಗರ ತಾಲೂಕಿನ ಚಂದಗಾಲು ಗ್ರಾಮದ ಸಿ.ವಿ.ಸುನೀಲ್ ಕುಮಾರ್ ಎಂಬಾತ ಹಣದಾಸೆಗೆ ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರನ್ನು ಯಾಮಾರಿಸಿ, ಗುರುಹಿರಿಯರ ಸಮ್ಮುಖದಲ್ಲಿ ಮೂರು ಮದುವೆಯಾಗುವ ಮೂಲಕ ಅಮಾಯಕ ಹೆಣ್ಣು ಮಕ್ಕಳು ಮತ್ತು ಅವರ ಕುಟುಂಬಸ್ಥರಿಗೆ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.ವೃತ್ತಿಯಲ್ಲಿ ವಕೀಲನಾದ ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮವೊಂದರ 36 ವರ್ಷದ ಮಹಿಳೆಯೊಬ್ಬರನ್ನು ಭಾರತ್ ಮ್ಯಾಟ್ರೊಮೋನಿಯಲ್‍ನಲ್ಲಿ ಪರಿಚಯ ಮಾಡಿಕೊಂಡಿದ್ದ. 2020ರ ಫೆಬ್ರವರಿಯಲ್ಲಿ ಕೆ.ಆರ್.ನಗರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗೋಣ ಎಂದು ನಂಬಿಸಿ ಸುಳ್ಳು ಪ್ರಮಾಣ ಪತ್ರ ಮಾಡಿಸಿ ಆ ಮಹಿಳೆಯನ್ನು ಯಾಮಾರಿಸುತ್ತಾನೆ. ಈ ಬಗ್ಗೆ ಆ ಮಹಿಳೆ ಪ್ರಶ್ನಿಸಿದ್ದಕ್ಕೆ ಆಕೆಗೆ ಚಿತ್ರಹಿಂಸೆ ನೀಡಿರುತ್ತಾನೆ. ಈ ಬಗ್ಗೆ ಆಕೆ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದಾಗ, ಅವರು ಇಬ್ಬರನ್ನು ಕರೆಸಿ 2020, ಜೂನ್ 18ರಂದು ಸರಳ ವಿವಾಹ ಮಾಡಿಸಿರುತ್ತಾರೆ.
ಆ ನಂತರ ಕೆ.ಆರ್.ನಗರ ಪಟ್ಟಣದಲ್ಲಿ ಇಬ್ಬರೂ ನೆಲೆಸಿರುತ್ತಾರೆ. ಸ್ವಲ್ಪ ದಿನಗಳ ನಂತರ ಸುನೀಲ್‍ಕುಮಾರ್ ಹಣ ನೀಡುವಂತೆ ಕಿರುಕುಳ ನೀಡಿ 5 ಲಕ್ಷದಷ್ಟು ಹಣವನ್ನು ತೆಗೆದುಕೊಂಡಿರುತ್ತಾನೆ. ಮತ್ತೆ ಹಣಕ್ಕಾಗಿ ಪೀಡಿಸಿ ಹಣ ಇಲ್ಲವೆಂದು ಆಕೆ ಹೇಳಿದಾಗ ಮತ್ತೊಂದು ಮದುವೆಯಾಗಲು ಒಪ್ಪಿಗೆ ನೀಡು ಎಂದು ಪತ್ನಿಗೆ ಕಿರುಕುಳ ನೀಡಿರುತ್ತಾನೆ ಎಂದು ಆರೋಪಿಸಲಾಗಿದೆ.ಆಕೆ 2020 ನ.10ರಂದು ಕೆ.ಆರ್.ನಗರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿರುತ್ತಾರೆ. ಈ ಸಂಬಂಧ ಕೆ.ಆರ್.ನಗರ ಮತ್ತು ಹುಣಸೂರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡು ಸುನೀಲ್‍ಕುಮಾರ್ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಿರುತ್ತಾನೆ.ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಮೈಸೂರಿನ ಬಂಬೂ ಬಜಾರ್ ಮಹಿಳೆಯೊಬ್ಬರನ್ನು ಗುರು-ಹಿರಿಯರ ಸಮ್ಮುಖದಲ್ಲಿ ಕೆ.ಆರ್.ನಗರ ತಾಲೂಕಿನ ಪ್ರಸಿದ್ದ ದೇವಾಲಯವೊಂದರಲ್ಲಿ 2021ರ ಜುಲೈ 27ರಂದು ಮದುವೆಯಾಗಿರುತ್ತಾನೆ. ಪಟ್ಟಣದಲ್ಲಿ ಇಬ್ಬರು ವಾಸವಾಗಿದ್ದು, ಮನೆ ಸ್ವಚ್ಛ ಮಾಡುವ ಸಂದರ್ಭದಲ್ಲಿ ಆತ ಮೊದಲೇ ಮದುವೆಯಾಗಿರುವ ಬಗ್ಗೆ ಒಡನಾಡಿ ಸಂಸ್ಥೆಯ ಪ್ರಮಾಣ ಪತ್ರ ಸಿಗುತ್ತದೆ.
ಈ ಬಗ್ಗೆ ಆತನನ್ನು ವಿಚಾರಿಸಿದಾಗ ಎಲ್ಲವು ನಿಜವೆಂದು ಒಪ್ಪಿಕೊಂಡು, ಮೊದಲ ಪತ್ನಿಗೆ 6 ಲಕ್ಷ ಹಣ ಮತ್ತು 120 ಗ್ರಾಂ ಚಿನ್ನವನ್ನು ನೀಡಿದರೆ ಆಕೆ ನನ್ನ ಮೇಲಿನ ಕೇಸ್ ವಾಪಸ್ ಪಡೆಯುತ್ತಾಳೆ. ಇಲ್ಲವಾದರೇ ನಾನು ಅವಳ ಜತೆಯೇ ವಾಸಿಸುತ್ತೇನೆ ಎಂದು ಎರಡನೇ ಪತ್ನಿಗೆ ಕಿರುಕುಳ ಕೊಡಲು ಪ್ರಾರಂಭಿಸುತ್ತಾನೆ.ಮದುವೆಗೆ ಮೊದಲೇ ಚೀಟಿ ಸಾಲ ಮತ್ತು ಕೃಷಿ ಚಟುವಟಿಕೆ ಎಂದು ಎರಡುವರೆ ಲಕ್ಷ ರೂಪಾಯಿಗಳಷ್ಟು ಹಣ ನೀಡಿದ ಎರಡನೇ ಪತ್ನಿ, ಇದಕ್ಕೆ ಒಪ್ಪದಿದ್ದಾಗ ಆಕೆಗೂ ಹಲ್ಲೆ ಮತ್ತು ಕಿರುಕುಳ ನೀಡಿರುತ್ತಾನೆ ಎನ್ನಲಾಗಿದೆ. ಈ ಬಗ್ಗೆ ಆಕೆಯ ಕುಟುಂಬಸ್ಥರಿಗೆ ತಿಳಿಸಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಮಾಡಿದರೂ ಬಗೆಹರಿಯದೆ, ಆತ ಪತ್ನಿಯನ್ನು ತವರು ಮನೆಯಲ್ಲೇ ಬಿಟ್ಟು ವಾಪಸ್ ಕರೆ ತಂದಿರುವುದಿಲ್ಲ ಎನ್ನಲಾಗಿದೆ.
Be the first to comment