ರಾಜ್ಯ ಸುದ್ದಿಗಳು
ದೇವನಹಳ್ಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ರೈತರು ಬೆಳೆದಿರುವ ಬೆಳೆಗಳು ನಾಶವಾಗಿದ್ದು, ನಷ್ಟ ಪರಿಹಾರ ಒದಗಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾ ಪ್ರಾಂತ ರೈತ ಸಂಘದ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಜಿಲ್ಲಾ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿ, ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಈ ನಾಲ್ಕು ತಾಲೂಕುಗಳಲ್ಲಿ ಮಳೆಯಿಂದ ಸುಮಾರು ಕೋಟಿಯಷ್ಟು ನಷ್ಟವಾಗಿರುತ್ತದೆ. ಕ್ಯಾರೆಟ್, ಬೀಟ್‌ರೂಟ್, ನೋಕಲ್, ಎಲೆಕೋಸು,ಕೊತ್ತಂಬರಿ ಸೊಪ್ಪು, ಸಬ್ಬಕ್ಕಿ, ದಂಟು, ಟೊಮೆಟೋ, ಮೂಲಂಗಿ ಎಲ್ಲಾ ತರಹ ಸೊಪ್ಪು, ಮತ್ತು ರೋಜ್, ಕನಕಾಂಬರ, ಕಾಕಡ, ಚೆಂಡುಹೂವು, ಸೇವಂತಿಗೆ ಇನ್ನು ಇತ್ಯಾದಿ ಬೆಳೆಗಳು ನಷ್ಟವಾಗಿರುತ್ತದೆ. ಕಳೆದ ೧೫ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ರೈತರು ಬೆಳೆದ ಬೆಳೆ ನೀರುಪಾಲಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಮದ್ಯ ಪ್ರವೇಶಿಸಿ ರೈತರು ಬೆಳೆದಿರುವ ಬೆಳೆಗಳು ನಾಶವಾಗಿರುವವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ರೈತರು ಸಂಕಷ್ಟದ ಪರಿಸ್ಥಿತಿಯಲ್ಲೂ ಬ್ಯಾಂಕುಗಳು, ಇತರೆ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡು ಬೆಳೆ ಇಟ್ಟಿರುತ್ತಾರೆ. ಇದೀಗ ಮಳೆಯಿಂದಾಗಿ ಬೆಳೆಗಳು ನಾಶವಾಗಿರುತ್ತದೆ. ಇದಕ್ಕೆ ನಷ್ಟ ಪರಿಹಾರವನ್ನು ಶೀಘ್ರವಾಗಿ ಒದಗಿಸಿಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ನಷ್ಟದಲ್ಲಿರುವ ಪ್ರತಿ ರೈತರನ್ನು ಸಂಪರ್ಕಿಸಿ ಕೂಡಲೇ ಸರಕಾರದಿಂದ ನಷ್ಟ ಪರಿಹಾರವನ್ನು ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರತಿಕ್ರಿಯಿಸಿ, ಮಳೆಯಿಂದ ಹಾನಿಯಾಗಿರುವ ಬೆಳೆಗಳ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಕಾನೂನಿನಡಿಯಲ್ಲಿ ನಷ್ಟ ಹೊಂದಿರುವ ರೈತರಿಗೆ ಪರಿಹಾರ ಒದಗಿಸಲು ಶಿಫಾರಸ್ಸು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಈ ವೇಳೆಯಲ್ಲಿ ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ವೆಂಕಟೇಗೌಡ, ಮುಖಂಡರಾದ ನಂಜೇಗೌಡ, ಗೋವಿಂದರಾಜು, ಸುಮಿತ್ರಪ್ರಶಾಂತ್ ಮತ್ತಿತರರು ಇದ್ದರು.
Be the first to comment