ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಜೀವ ಉಳಿಸುವ ರಕ್ತದ ಮಹತ್ವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಚಪ್ಪರಕಲ್ಲು ಬಳಿಯ ವಿಹಾನ್ ಪಬ್ಲಿಕ್ ಶಾಲೆಯಲ್ಲಿ ಬೆಂಗಳೂರು ಲಯನ್ಸ್ ಕ್ಲಬ್ ಆಫ್ ಯೂನಿವರ್ಸ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ವಿಹಾನ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶುದ್ಧ ಜಲ ಜೀವಜಲ, ಶುದ್ಧ ರಕ್ತ ಜೀವ ದ್ರವ್ಯ, ಗೋದಾನ, ಭೂದಾನ, ನೇತ್ರದಾನ, ಶ್ರತುದಾನ ಎಲ್ಲಾ ದಾನಗಳಿಂದ ರಕ್ತದಾನ ಶ್ರೇಷ್ಠವಾದದ್ದು, ಪ್ರಾಣಾಪಯದಿಂದ ಇರುವ ಹಲವಾರು ಜನರಿಗೆ ಪ್ರಾಣ ನೀಡುವ ರಕ್ತವನ್ನು ಯಾರು ಸೃಷ್ಠಿಸಲಾರರು, ನಾವೆಲ್ಲರೂ ಮನುಷ್ಯರು ಒಬ್ಬ ಕಷ್ಟದಲ್ಲಿರುವಾಗ ರಕ್ತದಾನ ಬಹಳಷ್ಟು ಸಹಕಾರಿಯಾಗುತ್ತದೆ. ಒಂದು ಜೀವ ಉಳಿವಿಗೆ ರಕ್ತದಾನ ಮಾಡಿದರೆ ಪುಣ್ಯ ಲಭಿಸುತ್ತದೆ. ಅಪಘಾತವಾದಾಗ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳಿಗೆ, ರಕ್ತ ಅತ್ಯವಶ್ಯಕವಾಗಿರುತ್ತದೆ. ಅಂತಹ ಸಮಯದಲ್ಲಿ ನಾವು ನೀಡಿರುವ ರಕ್ತ ಹೆಚ್ಚು ಸಹಕಾರಿಯಾಗುವುದರ ಜೊತೆಗೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ಮಾಡಿದರು.
ವಿಹಾನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಪ್ರತಾಪ್‌ಯಾದವ್ ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಗಬೇಕು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತ ನೀಡಿದರೆ, ದಿನದ ೨೪ ಗಂಟೆಗಳಲ್ಲಿ ಮತ್ತೇ ಹೊಸ ರಕ್ತಕಣಗಳು ಸೇರುವುದರ ಮೂಲಕ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿದ ಹಲವಾರು ಜನರಿಗೆ ಲಯನ್ಸ್ ಬ್ಲಡ್ ಸೆಂಟರ್ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ರೋಹಿತ್, ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ತಾಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ, ಜಿಲ್ಲಾ ಕಸಾಪ ಅಭ್ಯರ್ಥಿ ಪ್ರಾಂಶುಪಾಲ ಬಿ.ಎನ್.ಕೃಷ್ಣಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕಿ ಅಕ್ಷತಾರೈ, ಸಹಾಯಕರಾದ ನರಸಿಂಹಮೂರ್ತಿ, ಧನಂಜಯ್, ಶರ್ಮಿಳಾ, ವಿಹಾನ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ, ಸಹ ಶಿಕ್ಷಕರು, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಇದ್ದರು.
Be the first to comment