ರಾಜ್ಯ ಸುದ್ದಿಗಳು
ಕಾರವಾರ:
ಮುಂದಿನ ಐದು- ಹತ್ತು ವರ್ಷಗಳಲ್ಲಿ ಉತ್ತರ ಕನ್ನಡ ಹೇಗಾಗಲಿದೆ ಮತ್ತು ಅದಕ್ಕಾಗಿ ಜಿಲ್ಲೆಯ ಜನರು ಹೇಗೆ ತಯಾರಿರಬೇಕೆಂಬುದನ್ನು ತೆರೆದಿಟ್ಟಿದ್ದಾರೆ. ಜತೆಗೆ ಅಭಿವೃದ್ಧಿ ಎಂದು ಬಂದಾಗ ವಿರೋಧಿಗಳ ಕಾಟಜೋರಾಗಿದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಪ್ರಸ್ತುತ ಹಲವು ಅವಕಾಶಗಳಿಗೆ ತೆರೆದುಕೊಳ್ಳುತ್ತಿದೆ. ಬೃಹತ್ ಯೋಜನೆಗಳು ಜಿಲ್ಲೆಗೆ ಬರುತ್ತಿದ್ದು, ಜಿಲ್ಲೆಯ ಅಭಿವೃದ್ಧಿಯ ಕುರಿತಾಗಿ ಲೋಕಸಭಾ ಸಂಸದ ಅನಂತಕುಮಾರ ಹೆಗಡೆ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.
ಕರ್ನಾಟಕದ ಅಭಿವೃದ್ಧಿಯ ಹೆಬ್ಬಾಗಿಲು ಉತ್ತರ ಕನ್ನಡ:
ಮಂಗಳೂರಿನಲ್ಲೂ ಇಲ್ಲ, ಅಲ್ಲಿಯಕ್ಕಿಂತ ಅದೆಷ್ಟೋ ದೊಡ್ಡ ಬಂದರು ಸಮುಚ್ಛಯ ಉತ್ತರ ಕನ್ನಡಕ್ಕೆ ಬರುತ್ತದೆ. ಕರ್ನಾಟಕದ ನಿಜವಾದ ಅಭಿವೃದ್ಧಿಯ ಹೆಬ್ಬಾಗಿಲು ಎನ್ನುವುದಾದರೆ ಮುಂದಿನ ದಿನಗಳಲ್ಲಿ ಅದು ಉತ್ತರ ಕನ್ನಡವೇ’ ಎಂದಿದ್ದಾರೆ.
‘2023- 24ರಲ್ಲಿ ಅಂಕೋಲಾದ ನಾಗರಿಕ ವಿಮಾನ ನಿಲ್ದಾಣ ಶುರುವಾಗಲಿದೆ. 2022ಕ್ಕೆ ಹೊನ್ನಾವರ ಬಂದರು ಮುಗಿಯಬೇಕಿತ್ತು, ಸ್ವಲ್ಪ ಹೆಚ್ಚು ಕಡಿಮೆ ಆದ ಕಾರಣ 2023ಕ್ಕೆ ಮುಗಿಯಬಹುದು. ಕಾರವಾರದ್ದು ಕೂಡ ಕೋರ್ಟ್ ನಲ್ಲಿ ಬಹುತೇಕ ತೀರ್ಪು ಬಂದಂತಾಗಿದ್ದು, ಯಾವಾಗ ಬೇಕಾದರೂ ಪ್ರಕರಣ ಇತ್ಯರ್ಥವಾಗಬಹುದು. ಕಾರವಾರದಲ್ಲಿ, ಬೇಲೇಕೇರಿಯಲ್ಲೂ ಕೆಲಸ ಶುರುವಾಗಲಿದೆ. ಇದನ್ನು ನಾವು ಬೃಹತ್ ಬಂದರು ಸಂಕೀರ್ಣ ಎಂದು ಕರೆಯುತ್ತೇವೆ.
ವಿರೋಧಿ ಗುಂಪುಗಳ ಅಡ್ಡಿ; ಅಭಿವೃದ್ಧಿ ಪಡಿಸಲು ತೀರ್ಮಾನಿಸಿದ ಹೊಸ್ತಿಲಲ್ಲಿ:
ಒಟ್ಟಾರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತುಂಬಾ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಬರಬೇಕೆಂದು ತೀರ್ಮಾನ ಮಾಡಿದ ಹೊಸ್ತಿಲಲ್ಲೇ ಅಲ್ಲಲ್ಲಿ ಈ ರೀತಿಯ ಅಭಿವೃದ್ಧಿ ವಿರೋಧಿ ಗುಂಪುಗಳು ಕೆಲಸವನ್ನು ಶುರು ಮಾಡಿ ತಮ್ಮ ಚಟುವಟಿಕೆಗಳನ್ನು ಜಾಸ್ತಿ ಮಾಡಿವೆ ಸಾಗರಮಾಲಾ ಯೋಜನೆಯಡಿ ಕಾರವಾರದಲ್ಲಿ ಬೃಹತ್ ಪ್ರಮಾಣದ ಬಂದರು ಮಾಡಬೇಕೆಂದು ಕೇಂದ್ರ ಸರ್ಕಾರ ತೀರ್ಮಾನ ಮಾಡಿತು. ಅದಕ್ಕೆ ವಿರೋಧ ಶುರುವಾಯಿತು. ಸಾಗರಮಾಲಾ ಯೋಜನೆಯಡಿಯಲ್ಲಿ ಇಡೀ ಜಿಲ್ಲೆಯನ್ನು ಜೋಡಿಸುವ ಬೃಹತ್ ಹೆದ್ದಾರಿಗಳ ಸಮುಚ್ಛಯ ನಿರ್ಮಿಸಲು ತೀರ್ಮಾನವಾಯಿತು, ಅದಕ್ಕೂ ವಿರೋಧ ವ್ಯಕ್ತವಾಯಿತು. ಹೊನ್ನಾವರದಲ್ಲಿ ಬಂದರು ಕೆಲಸ ಪ್ರಾರಂಭವಾಗಿದೆ, ಅಲ್ಲೂ ವಿರೋಧ. ಇನ್ನೇನು ಬೇಲೇಕೇರಿ ಕೆಲಸ ಶುರುವಾಗಲಿಕ್ಕಿದೆ, ಗೊತ್ತಿಲ್ಲ ಮುಂದೆ ಏನಾಗುತ್ತ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಅಭಿವೃದ್ಧಿ ಅರಗಿಸಿಕೊಳ್ಳುವ ಸಾಮರ್ಥ್ಯವಿದೆಯಾ??
ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗಿವೆ, ಬಲವಾಗಿ ಅವು ಕೂಗನ್ನೆಬ್ಬಿಸಿವೆ. ಆದರೆ ಧನಾತ್ಮಕ ಶಕ್ತಿ ಯಾವುದೇ ಸದ್ದು ಮಾಡುತ್ತಿಲ್ಲ. ಈ ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳು ಜಿಲ್ಲೆಗೆ ಬಂದಾಗ ಅವುಗಳನ್ನು ಧಾರಣ ಮಾಡುವ ಸಾಮರ್ಥ್ಯ ನಮ್ಮಲ್ಲಿದೆಯೇ?
ಬಹುಸಂಖ್ಯಾತ ಉತ್ತರ ಕನ್ನಡದ ಜನರಿಗೆ ಈ ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಕಾಣಬೇಕೆಂಬ, ಆರ್ಥಿಕ ಚಟುವಟಿಕೆ ಬೆಳೆಯಬೇಕೆಂಬ ಹಂಬಲವಿದೆ. ಆದರೆ ಎಲ್ಲಿಂದಲೂ ಆ ಧ್ವನಿ ಕೇಳುತ್ತಿಲ್ಲ. ನಾನು ಪರಿಸರವಾದಿಗಳ ಸಾಮರ್ಥ್ಯದ ಬಗ್ಗೆ ಹೇಳುತ್ತಿಲ್ಲ, ಅದು ಬೇರೆ. ಪ್ರಜ್ಞಾವಂತ, ಔದ್ಯೋಗಿಕ ಸಮುದಾಯಕ್ಕೆ ಈ ಅಭಿವೃದ್ಧಿಯನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಇದೆಯಾ ಎನ್ನುವುದು ದೊಡ್ಡ ಪ್ರಶ್ನೆ’ ಎಂದಿದ್ದಾರೆ.
Be the first to comment