ಗ್ರಾಮ ಸಭೆ, ವಾರ್ಡ್ ಸಭೆಗೆ ಅಧಿಕಾರಿಗಳ ಗೈರು ರೈತ ಸಂಘದಿಂದ ಆಕ್ರೋಶ: ಅ.೭ರಂದು ನಡೆಯಲಿರುವ ಕುಂದಾಣ ಗ್ರಾಮ ಸಭೆಗೆ ಅಧಿಕಾರಿಗಳ ಹಾಜರಿಗೆ ಒತ್ತಾಯ…!

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು

CHETAN KENDULI

ದೇವನಹಳ್ಳಿ:

ಗ್ರಾಮಸಭೆ ಮಾಡುವ ಉದ್ದೇಶ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಲು ಅಧಿಕಾರಿಗಳೇ ಗೈರಾಗದಂತೆ ೩೨ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿರಬೇಕು ಇಲ್ಲವಾದರೆ ಗ್ರಾಮಸಭೆ ನಡೆಸಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ತಾಲೂಕು ಕಾರ್ಯದರ್ಶಿ ನಾಗರಾಜು ತಿಳಿಸಿದರು.

ತಾಲೂಕಿನ ಕುಂದಾಣ ಸರ್ಕಲ್‌ನಲ್ಲಿರುವ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇದೇ ಅ.೭ರಂದು ಕುಂದಾಣ ಗ್ರಾಪಂನಿಂದ ಗ್ರಾಮಸಭೆ ಹಮ್ಮಿಕೊಳ್ಳಲಾಗಿದೆ. ಇದರ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಇಲ್ಲ. ೩೨ ಇಲಾಖೆ ಅಧಿಕಾರಿಗಳು ಇದ್ದರೆ ಮಾತ್ರ ಗ್ರಾಮ ಸಭೆ ನಡೆಸಲು ಅವಕಾಶ ನೀಡುತ್ತೇವೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಗ್ರಾಮಸಭೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಳಮಟ್ಟದ ಅಧಿಕಾರಿಗಳನ್ನು ಗ್ರಾಮಸಭೆಗೆ ಪರವಾಗಿ ಕಳುಹಿಸಿಕೊಡಲು ಅವಕಾಶ ನೀಡಲಾಗುವುದಿಲ್ಲ. ಕಡ್ಡಾಯವಾಗಿ ಕ್ಷೇತ್ರದ ಶಾಸಕರು ಮತ್ತು ತಹಶೀಲ್ದಾರ್ ಖುದ್ದು ಇದ್ದು, ಗ್ರಾಮ ಸಭೆಗೆ ಎಲ್ಲಾ ಅಧಿಕಾರಿಗಳು ಇರುವಂತೆ ಸೂಚಿಸಬೇಕು. ಕೇವಲ ಕರಪತ್ರಕ್ಕೆ ಮಾತ್ರ ಹೆಸರುಗಳನ್ನು ಬರೆದು ಆಹ್ವಾನಿಸುತ್ತಾರೆ ಆದರೆ, ಗ್ರಾಮಸಭೆಯಲ್ಲಿ ಯಾವೊಬ್ಬ ಅಧಿಕಾರಿ ಹಾಜರಾಗದೆ ಗೈರು ಇದ್ದು, ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ನಿದರ್ಶನಗಳಿವೆ. ಅಬಕಾರಿ ಇಲಾಖೆಯವರು ಬಹಳ ನಿರ್ಲಕ್ಷ್ಯದೋರಣೆ ಅನುಸರಿಸುತ್ತಿದ್ದಾರೆ. ಗ್ರಾಪಂ ಕೂಗಳತೆಯಲ್ಲಿಯೇ ಎಂಎಸ್‌ಐಎಲ್ ತೆರೆದಿದ್ದರೂ ಕ್ರಮಕೈಗೊಳ್ಳುತ್ತಿಲ್ಲ. ಇಲ್ಲಿನ ನಾಡಕಚೇರಿಯನ್ನು ಕೇಳುವವರಿಲ್ಲದಂತೆ ಆಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಹೇಳಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಇರಲೇ ಬೇಕು. ಗ್ರಾಮಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಎಚ್ಚರಿಕೆ ನೀಡುವುದರ ಮೂಲಕ ಒತ್ತಾಯಿಸಿದರು.

ತಾಲೂಕು ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಆಸ್ಪತ್ರೆ, ಎಂಎಸ್‌ಐಎಲ್, ಕುಂದಾಣ ಬೆಟ್ಟದ ತಪ್ಪಲಿನಲ್ಲಿ ಅಕ್ರಮ ಮನೆ ನಿರ್ಮಾಣ, ಬೋಗಸ್ ದಾಖಲೆ ಸೃಷ್ಠಿ, ಈ ಹಿಂದಿನ ಗ್ರಾಮಸಭೆಯಲ್ಲಿ ಸಲ್ಲಿಸಿದ್ದ ಅರ್ಜಿಗಳಿಗೆ ಸಮಜಾಯಿಶಿ, ಬಡವರಿಗೆ ನಿವೇಶನ ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಕ್ಷೇತ್ರದ ಶಾಸಕರು ಗ್ರಾಮಸಭೆಗೆ ಬಂದು ವ್ಯವಸ್ಥಿತವಾಗಿ ನಡೆಸಬೇಕು. ಈ ಭಾಗದಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುವುದರ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆಯಬೇಕು. ಇಲ್ಲಿನ ಸಮಸ್ಯೆಗಳಿಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಬೇಕು. ಎಲ್ಲಾ ಅಧಿಕಾರಿಗಳನ್ನು ಒಳಗೊಂಡಂತೆ ಗ್ರಾಮಸಭೆ ನಡೆಸಬೇಕು ಇಲ್ಲವಾದರೆ ಗ್ರಾಮಸಭೆಯನ್ನು ಸ್ಥಳದಲ್ಲಿಯೇ ರದ್ದುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆಯಲ್ಲಿ ಗ್ರಾಪ್ರವೀಣ್‌ಕುಮಾರ್, ಕುಂದಾಣ ಹೋಬಳಿ ಸಂಚಾಲಕ ಬಿ.ಕೆ.ತಿಮ್ಮಪ್ಪ, ಸಂಚಾಲಕ ರವಿಕುಮಾರ್, ರೈತ ಮುಖಂಡರಾದ ಕೃಷ್ಣಪ್ಪ, ಮುನಿರಾಯಪ್ಪ, ಮುನಿಯಪ್ಪ, ಮರಿಯಪ್ಪ, ಅಂಬರೀಶ್, ನಾಗೇಶ್, ಗ್ರಾಮಸ್ಥರು ಹಾಗೂ ರೈತ ಮುಖಂಡರು ಇದ್ದರು.

ಪ್ರಮುಖಾಂಶಗಳು
ಗ್ರಾಮ ಸಭೆಗೆ ಕಡ್ಡಾಯವಾಗಿ ತಹಶೀಲ್ದಾರ್ ಹಾದಿಯಾಗಿ ಎಲ್ಲಾ ಅಧಿಕಾರಿಗಳು ಇರಬೇಕು
ಶಾಸಕರು ಕಡ್ಡಾಯವಾಗಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಬೇಕು
ಮೂಲಭೂತ ಸೌಕರ್ಯ, ನಾಡಕಚೇರಿ ಕಟ್ಟಡ ದುರಸ್ಥಿಗೊಳಿಸಬೇಕು
ಸ್ಮಶಾನಕ್ಕೆ ಹೋಗುವ ದಾರಿ ಮತ್ತು ಕಾಂಪೌಂಡ್ ಮಾಡಿಕೊಡಬೇಕು.
ಹೋಬಳಿ ಮಟ್ಟದಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕು.

Be the first to comment

Leave a Reply

Your email address will not be published.


*