ಕುಂದಾಣ ನಾಡಕಚೇರಿಗೆ ಬೇಕಿದೆ ಕಾಯಕಲ್ಪ…! ; ೧೦ ವರ್ಷಗಳಿಂದ ನೆನೆಗುದ್ದಿಗೆ | ಪಶುಪಾಲನಾ ಇಲಾಖೆಯಲ್ಲಿ ಕಾರ್ಯನಿರ್ವಹಣೆ

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು

CHETAN KENDULI

ದೇವನಹಳ್ಳಿ:

ಸುಮಾರು ೧೦ ವರ್ಷಗಳ ಹಿಂದೆ ಕುಂದಾಣ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಡಕಚೇರಿಯು ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ಪಶುಪಾಲನಾ ಇಲಾಖೆಯಲ್ಲಿ ಸ್ಥಳಾಂತರಗೊಂಡು ಜಾಗದ ಕೊರತೆಯ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದರೂ ಸಹ ಅಧಿಕಾರಿಗಳ ಇಚ್ಛಶಕ್ತಿ ಕೊರತೆಯಿಂದಾಗಿ ನಾಡಕಚೇರಿ ಕಾಯಕಲ್ಪ ಮೂಲೆಗುಂಪಾಗಿ ನೆನೆಗುದ್ದಿಗೆ ಬಿದ್ದಿರುವುದು ವಿಪರ್ಯಾಸವಾಗಿದೆ.

ಹೇಳಿ ಕೇಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನವಿರುವ ದೇವನಹಳ್ಳಿ ತಾಲೂಕಿನ ಕುಂದಾಣ ಕೇಂದ್ರ ಸ್ಥಳದಲ್ಲಿಯೇ ಈ ಹಿಂದಿನ ಕಟ್ಟಡದ ಜಾಗವು ಗ್ರಾಮ ಠಾಣಾ ಸರ್ವೆ ನಂ.೩೦೦ರಲ್ಲಿ ೫೫*೫೫ ಅಡಿಗಳಷ್ಟು ಜಾಗವಿದ್ದರೂ ಸಹ ಅನುದಾನ ಬಿಡುಗಡೆಗೊಳ್ಳದೆ, ನಾಡಕಚೇರಿ ಕಟ್ಟಡ ಭಾಗ್ಯ ಕಾಣದೆ, ಪಶುಪಾಲನಾ ಇಲಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುವ ನಾಡಕಚೇರಿಯನ್ನು ವಿನೂತನ ಕಟ್ಟಡವನ್ನು ಕಟ್ಟಿಕೊಡುವುದರಲ್ಲಿ ತೋರುತ್ತಿರುವ ಉದಾಸೀನತೆ ಇಡೀ ಗ್ರಾಮಸ್ಥರು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಪ್ರಶ್ನಿಸುವ ಪರಿಸ್ಥಿತಿ ಎದುರಾಗಿದೆ.

ಉಪತಹಶೀಲ್ದಾರ್ ಕಚೇರಿಯು ಪಶುಪಾಲನಾ ಇಲಾಖೆಯಲ್ಲಿದ್ದರೆ, ಬಾಡಿಗೆ ಮನೆಯೊಂದರಲ್ಲಿ ಕಂದಾಯ ಗ್ರಾಮ ಲೆಕ್ಕಿಗರ ಕಚೇರಿ ಇದ್ದು, ಹಾಲಿ ಜಾಗದಲ್ಲಿ ನಾಡಕಚೇರಿ ಮತ್ತು ಉಪತಹಶೀಲ್ದಾರ್ ಕಚೇರಿಯನ್ನು ನಿರ್ಮಾಣ ಮಾಡಿ, ಗ್ರಾಮಸ್ಥರ ಕುಂದು ಕೊರತೆಗೆ ಏಕ ಕಾಲದಲ್ಲಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಸಿಗುವಂತೆ ಮಾಡಿಕೊಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.

ಈಗಾಗಲೇ ಸಂಬಂಧಪಟ್ಟ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ನಾಡಕಚೇರಿ ನೂತನ ಕಟ್ಟಡ ವಿನ್ಯಾಸಕ್ಕಾಗಿ ಜಾಗವು ಕಾತುರದಿಂದ ಎದುರು ನೋಡುತ್ತಿದೆ. ಕುಂದಾಣ ಗ್ರಾಪಂ ಹೆಸರಿನಲ್ಲಿ ಖಾತೆ ನಂ.೨೮೭/೩೦೦ರ ಸ್ವತ್ತು ನಾಡ ಕಚೇರಿ ಕಟ್ಟಡ ನಿರ್ಮಾಣ ಮಾಡಲು, ಗ್ರಾಪಂನಿಂದ ನಿರಾಪೇಕ್ಷಣಾ ದೃಢೀಕರಣ ಪತ್ರವನ್ನು ಸಹ ಸೆ.೨ರಂದು ನೀಡಿದ್ದು, ಯಾವುದೇ ತಂಟೆ ತಕರಾರು ಇರುವುದಿಲ್ಲ. ಈಗಾಗಲೇ ನಾಡಕಚೇರಿಯ ಜಾಗದ ಬಗ್ಗೆ ೯ ಮತ್ತು ೧೦ನ್ನು ಲಗತ್ತಿಸಿದ್ದು, ನಿರ್ಮಾಣ ಕಾಮಗಾರಿ ವೆಚ್ಚವನ್ನು ಸಹ ಲಗತ್ತಿಸಿ, ನೂತನ ಕಟ್ಟಡಕ್ಕಾಗಿ ತಹಶೀಲ್ದಾರ್ ಅವರಿಗೆ ಮೆ.೨೫, ೨೦೨೧ರಂದು ಉಪತಹಶೀಲ್ದಾರ್ ಅವರಿಂದ ಪತ್ರ ಬರೆಯಲಾಗಿದೆ. ಹೀಗಿದ್ದರೂ ಸಹ ಈಗಿರುವ ಹಾಲಿ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಳಿಸಿ ಸುಸ್ಸಜ್ಜಿತವಾದ ನಾಡಕಚೇರಿ ಕಟ್ಟಡವನ್ನು ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುವುದು ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮನವಿಯಾಗಿದೆ.

೧೦ ವರ್ಷಗಳಿಂದ ನೆನೆಗುದ್ದಿಗೆ ನಾಡಕಚೇರಿ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಿಕೊಟ್ಟರೆ ಸಾಕಷ್ಟು ಅನುಕೂಲವಾಗುತ್ತದೆ. ಈಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಾಲಿ ಪಶುಪಾಲನಾ ಇಲಾಖೆಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಪಶುಪಾಲನಾ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅಬಾಸವಾಗುತ್ತಿದೆ.
– ಚೈತ್ರಾ | ಉಪತಹಶೀಲ್ದಾರ್, ನಾಡಕಚೇರಿ, ಕುಂದಾಣ

ಕೆಲಸ ಕಾರ್ಯಗಳಿಗಾಗಿ ನಾಡಕಚೇರಿಗೆ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಬರುತ್ತಾರೆ. ನಾಡಕಚೇರಿಯು ಒಂದು ಕಡೆಯಲ್ಲಿದ್ದು, ಆರ್‌ಐ ಕಚೇರಿ ಮತ್ತೊಂದೆಡೆ ಇದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಒಂದೇ ಕಡೆ ನಾಡಕಚೇರಿ ಇದ್ದರೆ ಅನುಕೂಲವಾಗುತ್ತದೆ. ಇರುವ ಜಾಗದಲ್ಲಿ ನೂತನ ಕಟ್ಟಡ ಕಟ್ಟಿಕೊಡಲು ಅಧಿಕಾರಿಗಳು ಇಚ್ಛಶಕ್ತಿ ತೋರಬೇಕು.
– ರವಿ | ಗ್ರಾಮಸ್ಥ, ಬೀರಸಂದ್ರ

Be the first to comment

Leave a Reply

Your email address will not be published.


*